ಅಂಕೋಲಾ: ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಬಲಿದಾನ ಹಿಂದಿನ ಇತಿಹಾಸ ಇಂದಿನ ಪೀಳಿಗೆ ಸದಾ ನೆನಪಿಟ್ಟುಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಇಲ್ಲಿಯ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಏರ್ಪಡಿಸಲಾಗಿದ್ದ ಕನ್ನಡ ವೈಶ್ಯ ಸ್ವಾತಂತ್ರ್ಯ ಯೋಧರ ಹೋರಾಟದ ನೆನಪಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಂತಹ ನಮ್ಮ ಪೂರ್ವಜರ ನೆನಪು ಮಾಡುವುದು ಇಂದಿನ ಪಿಳಿಗೆಯಿಂದ ಆಗುತ್ತಿಲ್ಲ. ಇಂದು ಆದರ್ಶ ಮೌಲ್ಯಗಳು ಮರೆಯಾಗುತ್ತಿದ್ದು ಹಣದ ಸುತ್ತ ಜಗತ್ತು ಸುತ್ತುತ್ತಿದೆ. ಹೀಗಾದರೆ ಸಮಾಜ ಸ್ವಸ್ಥವಾಗಿ ಉಳಿಯಲು ಸಾಧ್ಯವಿಲ್ಲ. ನಮ್ಮ ಪಾಲಕರು ಮಕ್ಕಳಿಗೆ ದೇಶ- ಸಮಾಜಕ್ಕಾಗಿ ತ್ಯಾಗ ಮಾಡಿದವರ ಇತಿಹಾಸ ತಿಳಿಸಬೇಕು. ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರ ಜೊತೆಗೆ ಎಲೆ ಮರೆಯ ಕಾಯಿಯಂತೆ ಜೀವನವನ್ನೇ ಮುಡಿಪಾಗಿಟ್ಟ ಹಲವರನ್ನು ಸ್ಮರಿಸಿ ಗೌರವಿಸುವ ಕಾರ್ಯ ಆಗಬೇಕು. ಈ ದಿಶೆಯಲ್ಲಿ ವೈಶ್ಯ ಸಮಾಜದವರು ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಯುವಾ ಬ್ರಿಗೇಡ್‌ನ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ ಎನ್ನುವುದು ಗೊತ್ತಿದೆ. ಆದರೆ ಸ್ವಾತಂತ್ರ್ಯ ಹೋಗಿದ್ದು ಎಂದು ಮತ್ತು ಏಕೆ ಎನ್ನುವುದರ ಅರಿವಿಲ್ಲ. ಇದನ್ನು ಅರಿತಾಗ ಮಾತ್ರ ಸ್ವಾತಂತ್ರ್ಯದ ತ್ಯಾಗ, ಬೆಲೆ ಅರ್ಥವಾದೀತು ಎಂದು ಹೇಳಿದರು.
ಕರ್ನಾಟಕ ಆರ್ಯ ವೈಶ್ಯಮಹಾ ಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಮನೋಹರ ಗೋವಿಂದ ಮಲ್ಮನೆ ಮುಂಬೈ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಮನೆಯವರಾದ ಪ್ರಮುಖರಾದ ಶೇಷಗಿರಿ ಗೋವಿಂದ ಶೆಟ್ಟಿ ಮಲ್ಮನೆ, ಭಾವಿಕೇರಿ, ದಿಗಂಬರ ಫಕೀರ ಹೊಸ್ಮನೆ, ಭಾವಿಕೇರಿ ರಾಮಚಂದ್ರ ಸುಬ್ರಾಯ ಶೆಟ್ಟಿ, ಭಾವಿಕೇರಿ, ಶ್ರೀಮತಿ ಗೀತಾ ಆನಂದು ಬಡಗೇರಿ, ಕೃಷ್ಣಾನಂದ ವಿಠಲ ಶೆಟ್ಟಿ, ಹೊನ್ನೇಕೇರಿ, ಮನೋಹರ ಶಂಕರ ಶೆಟ್ಟಿ, ಅಂಬಾರಕೊಡ್ಲ, ಮೋಹನ ದುರ್ಗ ಶೆಟ್ಟಿ, ಕಂತ್ರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾರದಾ ಫಕೀರ ಶೆಟ್ಟಿ, ಭಾವಿಕೇರಿ, ಭವಾನಿ ಶಾಂತಾರಾಮ ಶೆಟ್ಟಿ, ವಾಲಗ ವತ್ಸಲಾ ಶಂಕರ ಶೆಟ್ಟಿ, ಅಂಬಾರಕೊಡ್ಲ ಅವರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ದಿ. ನಾಗಪ್ಪ ಹರಿಯಪ್ಪ ಶೆಟ್ಟಿ, ಅಂಕೋಲಾ ದಿ. ವಿಠಲ ನಾಗಪ್ಪ ಶೆಟ್ಟಿ, ಕಾಂಚನ್ ದಿ. ಸುಬ್ರಹ್ಮಣ್ಯ ನಾಗಪ್ಪ ಶೆಟ್ಟಿ, ಉಳುವರೆ ಅವರನ್ನು ಸ್ಮರಿಸಲಾಯಿತು. ಗಾಯಕಿ ವರ್ಷಿಣಿ ಶೆಟ್ಟಿ ವಂದೇ ಮಾತರಂ ಹಾಡಿದರು. ಸ್ವಾಗತ ಗೀತೆ ಮತ್ತು ನಾಡಗೀತೆಯನ್ನು ಗೀತಾ ಶೆಟ್ಟಿ ಸಂಗಡಿಗರು ಹಾಡಿದರು. ಸಂಚಾಲಕ ಮನೋಹರ ಗೋವಿಂದ ಮಲ್ಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.