ಯಲ್ಲಾಪುರ: ಕಳಪೆ ಕಾಮಗಾರಿಯ ವಿರುದ್ಧ ತನಿಖೆಗೆ ಒಳಪಡಿಸುವಂತೆ ಸಿಇಒಗೆ ಅರ್ಜಿ ಸಲ್ಲಿಸಲಾಗಿತ್ತು. ಕಾಮಗಾರಿ ಪರಿಶೀಲನೆ ವೇಳೆ ತನಿಖಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳ ಎದುರು ಗುತ್ತಿಗೆದಾರ ತಮ್ಮ ಮೇಲೆ ಹಲ್ಲೆ ಮಾಡಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಒಳಪಡಿಸಬೇಕೆಂದು ತಾಲ್ಲೂಕಿನ ದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಶ್ವನಾಥ ಹಳೆಮನೆ ಆಗ್ರಹಿಸಿದ್ದಾರೆ.
ಅವರು ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಮೇಲೆ ಆಗಿರುವ ಹಲ್ಲೆಯ ಕುರಿತು ವಿವರಿಸಿದರು. ದೇಹಳ್ಳಿ ಪಂಚಾಯತಿಯ 2021-22 ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ರಸ್ತೆ ಮತ್ತು ಸೇತುವೆ ಕಾಮಗಾರಿಯಲ್ಲಾದ ಅವ್ಯವಹಾರ ಬಗ್ಗೆ ತನಿಖೆ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ)ಗಳಿಗೆ ಮನವಿ ಸಲ್ಲಿಸಲಾಗಿತ್ತು, ಈ ಕುರಿತು ಸಿಇಓ ಅವರು ತನಿಖೆ ನಡೆಸುವಂತೆ ಪಿಎಂಜಿಎಸ್.ವೈ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರನ್ನು ನೇಮಿಸಿದ್ದರು. ನ.5ರಂದು ಕಾಮಗಾರಿಯ ಪರಿಶೀಲನೆಗೆ ಆಗಮಿಸುವುದಾಗಿ ಅಧಿಕೃತವಾಗಿ ತಿಳಿಸಿದ್ದ ಪಿಎಂಜಿಎಸ್.ವೈ ಅಭಿಯಂತರರು, ಅಂದು ಬಾರದೆ ನ.7 ರಂದು ಅರ್ಜಿದಾರರಾದ ತಮಗೆ ಮಾಹಿತಿ ನೀಡದೆ, ತನಿಖಾಧಿಕಾರಿ ಸಂಬಂಧ ಪಡದ 5-6 ಜನರೊಂದಿಗೆ ಸ್ಥಳದ ಪರಿಶೀಲನೆ ನಡೆಸಿದ್ದರು.
ಬಳಗಾರ-ದೇವಸ ರಸ್ತೆಯ ಪರಿಶೀಲನೆ ನಡೆಸುತ್ತಿರುವುದು ತಿಳಿದು ಬಂದು, ನಾನು ಸ್ಥಳಕ್ಕೆ ಹೋಗಿ ಈ ಕುರಿತು ನನಗೆ ಮಾಹಿತಿ ನೀಡದೆ ಪರಿಶೀಲನೆ ಮಾಡಿರುವ ಕುರಿತು ಪಿಎಂಜಿಎಸ್.ವೈ ಅಭಿಯಂತರ ಬಳಿ ವಿಚಾರಿಸುತ್ತಿದ್ದಾಗ, ಗುತ್ತಿಗೆದಾರರಾದ ಗಣಪತಿ ಮುದ್ದೆಪಾಲ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನವನ್ನು ಉಲ್ಲಂಘಿಸಿ ಅರ್ಜಿದಾರರಾದ ತಮಗೆ ಲೆಕ್ಕಿಸದೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇವರೊಂದಿಗೆ ಕಾಮಗಾರಿಯ ಬಿಲ್ ಮಾಡಿದ ಯಲ್ಲಾಪುರ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಭಟ್ ಹಾಗೂ ಇವರ ಸಹಾಯಕ ಇಂಜಿನಿಯರ್ ಜೊತೆಗೆ ಇದ್ದರು.
ಈ ಕುರಿತು ಗಣಪತಿ ಮುದ್ದೆಪಾಲ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಬಳಿ ದೂರು ನೀಡಲಾಗಿದೆ. ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹಾಗೆಯೇ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷರಿಗೂ ದೂರು ನೀಡಲಾಗಿದೆ. ಅವರು ಈ ಕುರಿತು ಸಭೆ ಸೇರಿ ಪಂಚಾಯತಿ ಸದಸ್ಯರ ಮೇಲೆ ಗುತ್ತಿಗೆದಾರರಿಂದ ಆದ ಹಲ್ಲೆಯನ್ನು ಖಂಡಿಸಿ ಠರಾವು ಮಾಡಿದ್ದಾರೆ. ಹಲ್ಲೆ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮತ್ತು ಅವರ ಗುತ್ತಿಗೆದಾರಿಕೆಯ ಲೈಸನ್ಸ್ ರದ್ದು ಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ನೀಡಲಿದ್ದಾರೆ.
ಹಲ್ಲೆ ಮಾಡಿದ ಗುತ್ತಿಗೆದಾರರನ್ನು ಬಂಧಿಸಬೇಕು, ದೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇನ್ನೂ ಅನೇಕ ಗ್ರಾಮಗಳಲ್ಲಿ ಅವ್ಯವಹಾರದ ಕಾಮಗಾರಿಗಳು ನಡೆದಿದ್ದು, ಇವುಗಳನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಸಾರ್ವಜನಿಕರ ಜೊತೆಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವಜ್ರಳ್ಳಿಯ ವಿಎನ್ ಭಟ್ ನಡಿಗೆಮನೆ ಪತ್ರಿಕಾಗೋಷ್ಠಿಯಲ್ಲಿದ್ದರು.