Slide
Slide
Slide
previous arrow
next arrow

ಹವಾಮಾನ ವೈಪರೀತ್ಯದಿಂದ ಶೂನ್ಯವಾದ ಉಪ್ಪು ಸಂಗ್ರಹ: ಫೆಬ್ರುವರಿವರೆಗೆ ಸಾಣಿಕಟ್ಟಾ ಘಟಕ ಸ್ಥಗಿತ

300x250 AD

ಕುಮಟಾ: ಉಪ್ಪಿನ ರುಚಿಗೆ ಬೆಲೆ ಕಟ್ಟಲಾಗದು. ಯಾವುದೇ ಆಹಾರಕ್ಕಾದರೂ ಉಪ್ಪಿಲ್ಲದೇ ರುಚಿಸಲಾರದು. ಹೀಗಿರುವಾಗ ಮಾರುಕಟ್ಟೆಯಲ್ಲಿ ಉಪ್ಪು ದುಬಾರಿಯಾದರೇ ಅಥವಾ ಉಪ್ಪು ಸಿಗದೇ ಹೋದರೆ ಹೇಗಾಗಬಹುದು ಎಂಬ ಚಿಂತೆ ಕಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಿಲ್ಲೆಯಲ್ಲಿ ಉಪ್ಪಿನ ಬೆಲೆ ಹೆಚ್ಚಳವಾಗಿದೆ. ಒಂದು ಪ್ಯಾಕೇಟ್‌ ಸಾಣಿಕಟ್ಟಾ ಉಪ್ಪಿನ ದರ ₹ 20 ಇದೆ. ಆದರೆ ಮಾರುಕಟ್ಟೆಯಲ್ಲಿ ಈ ಉಪ್ಪಿಗೆ ₹ 40 ನೀಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಹವಾಮಾನ ವೈಪರೀತ್ಯಗಳಿಂದ ಉಪ್ಪಿನ ಸಂಗ್ರಹವಾಗದೇ ಇರುವುದಾಗಿದೆ.

ತಾಲೂಕಿನ ಸಾಣಿಕಟ್ಟಾದಲ್ಲಿ ಸಾಂಪ್ರದಾಯಿಕವಾಗಿ ಉಪ್ಪನ್ನು ತಯಾರಿಸಲಾಗುತ್ತದೆ. ಇಲ್ಲಿ ವಿಶಾಲವಾದ 420 ಎಕರೆ ಪ್ರದೇಶದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಉಪ್ಪು ತಯಾರಿಸಲಾಗುತ್ತಿದೆ.

ನಾಗರಬೈಲ್ ಉಪ್ಪು ತಯಾರಕರ ಸಹಕಾರಿ ಸಂಘ ಉಪ್ಪು ಉತ್ಪಾದನೆ ಮಾಡುತ್ತಿದ್ದು, ಪ್ರತಿ ವರ್ಷ 10 ಸಾವಿರ ಟನ್ ಗೂ ಹೆಚ್ಚು ಉಪ್ಪನ್ನು ಉತ್ಪಾದನೆ ಮಾಡುತ್ತಿದೆ. ಹೀಗೆ ಉತ್ಪಾದನೆಯಾದ ಉಪ್ಪು ಸಾಣಿಕಟ್ಟಾ ಉಪ್ಪು ಎಂಬ ಹೆಸರಿನಲ್ಲಿ ಉತ್ತರ ಕನ್ನಡ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಶಿವಮೊಗ್ಗ, ಮೈಸೂರು ಹಾಗೂ ನೆರೆಯ ಗೋವಾಕ್ಕೆ ಸಹ ರಫ್ತು ಮಾಡಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಉಪ್ಪಿಗೆ ಬರ:

300x250 AD

ನೈಸರ್ಗಿಕವಾಗಿ ಉತ್ಪಾದನೆಯಾಗುವ ಈ ಉಪ್ಪು ಹೆಚ್ಚು ರುಚಿಯ ಜೊತೆಗೆ ಔಷಧೀಯ ಸತ್ವ ಸಹ ಹೊಂದಿದೆ. ಹೀಗಾಗಿ ಈ ಉಪ್ಪನ್ನು ಔಷಧ, ಮಾವಿನ ಉಪ್ಪಿನಕಾಯಿ ತಯಾರಿಕೆ, ಒಣಮೀನು ತಯಾರಿಕೆ ಹಾಗೂ ಅಡುಗೆಗೆ ಹೆಚ್ಚಿನದಾಗಿ ಬಳಸಲಾಗುತ್ತದೆ. ಇಲ್ಲಿನ ಉಪ್ಪು ಬಣ್ಣದಲ್ಲಿ ಕೆಂಪಾಗಿದ್ದು ವಿಶೇಷ ಬೇಡಿಕೆ ಸಹ ಹೊಂದಿದೆ. ಆದರೆ ಕಳೆದ ಮೂರು ವರ್ಷದಿಂದ ವಿಪರೀತ ಮಳೆ, ಹವಾಮಾನ ವೈಪರೀತ್ಯದಿಂದ ಉಪ್ಪು ಉತ್ಪಾದನೆಯಲ್ಲಿ ಇಳಿಕೆ ಕಂಡಿದ್ದು, ಕಳೆದ ವರ್ಷ 10 ಸಾವಿರ ಟನ್ ಉತ್ಪಾದನೆಯಾಗುವ ಜಾಗದಲ್ಲಿ ಕೇವಲ ಮೂರು ಸಾವಿರ ಟನ್ ಮಾತ್ರ ಉತ್ಪಾದನೆಯಾಗಿದೆ. ಇನ್ನು ಈ ವರ್ಷ ಅದಕ್ಕಿಂತಲೂ ಪಾತಾಳ ಕಚ್ಚಿದ್ದು, ಉಪ್ಪು ಉತ್ಪತ್ತಿಯಾಗದೇ ಘಟಕವನ್ನು ಮುಂದಿನ ಫೆಬ್ರವರಿಯವರೆಗೆ ಸ್ಥಗಿತ ಮಾಡಲಾಗಿದೆ‌ ಎಂದು ನಾಗರಬೈಲ್ ಸಾಣಿಕಟ್ಟಾ ಉಪ್ಪು ತಯಾರಿಕಾ ಸಂಘದ ಅಧ್ಯಕ್ಷ ಅರುಣ್ ನಾಡಕರ್ಣಿ ಹೇಳಿದ್ದಾರೆ.

ಸಾಣಿಕಟ್ಟಾದಲ್ಲಿ ಉಪ್ಪು ಉತ್ಪಾದನೆ ಇಳಿಕೆಯಾಗುತಿದ್ದಂತೆ ನಾಗರಬೈಲ್ ಉಪ್ಪು ತಯಾರಿಕ ಸಹಕಾರಿ ಸಂಘ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಉಪ್ಪನ್ನು ಸರಬರಾಜು ಮಾಡುವಲ್ಲಿ ಸಾಧ್ಯವಾಗಿಲ್ಲ. ಅದಲ್ಲದೇ ಈ ವರ್ಷ ಉಪ್ಪು ಉತ್ಪಾದನೆಯಾಗದೇ ಸಂಪೂರ್ಣ ಸ್ಥಗಿತ ಮಾಡಿರುವುದರಿಂದ ಹೆಚ್ಚು ಬೇಡಿಕೆಯಿರುವ ಈ ಉಪ್ಪು ಇದೀಗ ಜಿಲ್ಲೆಯಲ್ಲಿ ಒಂದು ಪ್ಯಾಕೇಟ್ ಗೆ ₹ 40 ಏರಿಕೆ ಕಂಡಿದೆ.

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿ ಕೆಂಪು ಉಪ್ಪು ಸಿಗದೇ ತೊಂದರೆಯಾಗಿದ್ದು ಗುಜರಾತ್ ನಿಂದ ಬರುವ ಬಿಳಿ ಉಪ್ಪನ್ನು ಬಳಸುವಂತಾಗಿದೆ. ಇನ್ನು ಈ ಕುರಿತು ಬಳಕೆದಾರರು ಸಾಣಿಕಟ್ಟ ಉಪ್ಪುನ್ನ ಬಳಕೆ ಮಾಡುವ ನಮಗೆ ಮಾರುಕಟ್ಟೆಗೆ ಬರುವ ಬೇರೆ ಬೇರೆ ಉಪ್ಪನ್ನ ಬಳಕೆ ಮಾಡಲು ಆಗುವುದಿಲ್ಲ. ನೈಸರ್ಗಿಕ ಸಾಣಿಕಟ್ಟಾ ಉಪ್ಪನ್ನು ನಾವು ಬಳಕೆ ಮಾಡುತ್ತೇವೆ. ಹೇರಳವಾಗಿ ಉಪ್ಪು ಸಿಕ್ಕರೆ ಅನುಕೂಲವಾದೀತು. ಮಾರುಕಟ್ಟೆಯಲ್ಲಿ ದರ ಕೂಡ ಹೆಚ್ಚಾಗುವುದಿಲ್ಲ ಎಂದು ಸ್ಥಳೀಯ ಸಂತೋಷ ಗುರುಮಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top