Slide
Slide
Slide
previous arrow
next arrow

ಉಳವಿ ಗ್ರಾಮ ಪಂಚಾಯತದ ಗ್ರಾಮ ಸಭೆ: ಕುಂದುಕೊರತೆಗಳ ಚರ್ಚೆ

300x250 AD

ಜೊಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯತದ ಗ್ರಾಮ ಸಭೆಯು ಉಳವಿ ಚನ್ನಬಸವೇಶ್ವರ ಸಭಾಭವನದಲ್ಲಿ ಉಳವಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಂಗಲಾ ಮಿರಾಶಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಮಂಜುನಾಥ ಮೊಕಾಶಿ, ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ, ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಆಗುವ ಎಲ್ಲಾ ಕೆಲಸಗಳನ್ನು ಮಾಡಿದ್ದೇವೆ. ಈ ನಿಟ್ಟಿನಲ್ಲಿ ಅನುದಾನ ಮಂಜೂರು ಮಾಡಲು ಸಹಾಯ ಮಾಡಿದ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಅಭಿನಂದಿಸುತ್ತೇನೆ. ಗ್ರಾಮಸ್ಥರು ಯಾವುದೇ ಸಮಸ್ಯೆ ಇದ್ದಲ್ಲಿ ಗ್ರಾಮ ಪಂಚಾಯತಗೆ ಬಂದು ತಿಳಿಸಿ ಎಂದರು.
ಕೃಷಿ ಇಲಾಖೆ ಅಧಿಕಾರಿ ಮದನ್ ಮಾತನಾಡಿ, ಭತ್ತದ ಬೀಜಗಳನ್ನು ನಮ್ಮ ಇಲಾಖೆಯಲ್ಲೆ ತೆಗೆದುಕೊಳ್ಳಿ, ಉತ್ತಮ ಬೀಜಗಳು ನಮ್ಮಲ್ಲಿ ನೀಡಲಾಗುತ್ತದೆ. ಭತ್ತಕ್ಕೆ ರೋಗಗಳು ಕಡಿಮೆ ಇರುತ್ತವೆ. ಉಳವಿಯಲ್ಲಿ ರೈತರಿಗೆ ಅವಶ್ಯಕತೆ ಇರುವಾಗ ಗೊಬ್ಬರಗಳನ್ನು ಇಲ್ಲಿಯೇ ವ್ಯವಸ್ಥೆ ಮಾಡುತ್ತೇವೆ ಎಂದರು.
ಕಂದಾಯ ಇಲಾಖೆ ಅಧಿಕಾರಿಗಳು ಮಾತನಾಡುತ್ತಿದಂತೆ ರೈತರು ಆರ್‌ಟಿಸಿಗಳಲ್ಲಿ ಬೆಳೆಗಳ ಹೆಸರುಗಳು ಸರಿಯಾಗಿ ಕಾಣಿಸುತ್ತಿಲ್ಲ. ಕೆಲ ರೈತರ ಆರ್‌ಟಿಸಿಯಲ್ಲಿ ಹಕ್ಕುಗಳನ್ನು ತೆಗೆಯಲಾಗಿದೆ. ಅಲ್ಲದೇ ರೈತರ ಹೊಸ ಆರ್.ಟಿ.ಸಿ ಮಾಡಿಕೊಡುವಾಗ ಕೆಲಸ ನಿಧಾನವಾಗುತ್ತಿದೆ. ಅಡಿಕೆ ಕೊಳೆ ರೋಗದ ಬಗ್ಗೆ ಸರಿಯಾದ ಸಮೀಕ್ಷೆ ಇಲಾಖೆ ನಡೆಸಿಲ್ಲ ಎಂದು ಜನರು ವಾದಿಸಿದರು. ತೋಟಗಾರಿಕಾ ಇಲಾಖೆಗೆ ಕಳೆದ ಹಲವಾರು ವರ್ಷಗಳಿಂದ ಅಡಿಕೆ ಕೊಳೆ ರೋಗದ ಅರ್ಜಿಗಳನ್ನು ರೈತರು ನೀಡಿದ್ದಾರೆ. ಆದರೆ ಯಾವುದೇ ಪರಿಹಾರ ರೈತರಿಗೆ ಸಿಕ್ಕಿಲ್ಲ ಎಂದು ರೈತರು ತಿಳಿಸಿದರು.
ಪಶು ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಳವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿವಪುರ, ಸುಳಗೇರಿ ಗ್ರಾಮಗಳಿಗೆ ತಿಂಗಳಿಗೆ ಒಂದು ಬಾರಿ ಭೇಟಿ ನೀಡಬೇಕು. ಇದಕ್ಕೆ ಉಳವಿ ಗ್ರಾಮ ಪಂಚಾಯತಿ ವತಿಯಿಂದ ಇಂಧನದ ಖರ್ಚು ನೀಡಲಾಗುವುದು ಎಂಬುದನ್ನು ಸಭೆಯಲ್ಲಿ ತಿಳಿಸಲಾಯಿತು.
ಶಿಕ್ಷಣ ಇಲಾಖೆ ಸರದಿ ಬಂದಾಗ ಕೆಲ ಶಾಲೆಗಳಲ್ಲಿ ಶೌಚಾಲಯ, ಬಿಸಿಯೂಟದ ಕೊಠಡಿ ಇಲ್ಲದ ಬಗ್ಗೆ ತಿಳಿಸಲಾಯಿತು. ಶಿವಪುರ, ಹೆಬ್ಬಾಳ, ಸಿದ್ದೋಲಿ ಗ್ರಾಮಗಳಿಗೆ ಬಿಸಿಯೂಟದ ಅಕ್ಕಿ ಬೇಳೆಕಾಳುಗಳು ಶಾಲೆಗಳಿಗೆ ತಲುಪುತ್ತಿಲ್ಲ. ಈ ಬಗ್ಗೆ ತಾಲೂಕು ಪಂಚಾಯತಿ ನಿರ್ಲಕ್ಷ್ಯ ತಾಳಿದೆ. ಈ ವ್ಯವಸ್ಥೆ ಸರಿಪಡಿಸಬೇಕೆಂದು ಸಭೆಯಲ್ಲಿ ಸಾರ್ವಜನಿಕರು ಮನವಿ ಮಾಡಿದರು. ಉಳವಿಯಿಂದ ಜೊಯಿಡಾ ತನಕ ಸರಿಯಾದ ಬಸ್ಸ ವ್ಯವಸ್ಥೆ ಆಗಬೇಕು, ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಜನರು ತಿಳಿಸಿದರು.
ಅರಣ್ಯ, ಹೆಸ್ಕಾಂ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆಯ ವರದಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ಉಳವಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಹನೀಫ್, ಉಳವಿ ದೇವಸ್ಥಾನದ ಅರ್ಚಕ ಶಂಕರಯ್ಯ ಕಲ್ಮಠ, ಶಿಕ್ಷಣ ಇಲಾಖೆಯ ಬಶೀರ್ ಶೇಖ್, ವಲಯ ಅರಣ್ಯಾಧಿಕಾರಿ ಪ್ರಕಾಶ ದೊಡ್ಡಮನಿ, ಪಶು ಇಲಾಖೆಯ ಡಾ.ಮಂಜಪ್ಪ, ಡಾ.ಸುಜಾತಾ ಉಕ್ಕಲಿ, ಶಿಶು ಅಭಿವೃದ್ಧಿ ಇಲಾಖೆಯ ಶಾರದಾ ಮರಾಠೆ, ಹೆಸ್ಕಾಂ ಇಲಾಖೆಯ ಕಾವೇರಿ ಕೆ., ಕುಡಿಯುವ ನೀರು ಸರಬರಾಜು ಇಲಾಖೆಯ ಮಂಜುನಾಥ, ತೋಟಗಾರಿಕಾ ಇಲಾಕೆಯ ಯಲ್ಲಾರಲಿಂಗ ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು, ಉಳವಿ ಗ್ರಾಮ ಪಂಚಾಯತಿ ಸದಸ್ಯರು, ಉಳವಿ ವ್ಯಾಪ್ತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top