ದಾಂಡೇಲಿ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಕನಕದಾಸ ಹಾಗೂ ಒನಕೆ ಓಬವ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ದುಂಡಪ್ಪ ಗೂಳೂರಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ನಗರದಲ್ಲಿರುವ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಾರ್ಯಕ್ರಮವನ್ನ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಕನಸದಾಸರ ಮತ್ತು ಒನಕೆ ಓಬವ್ವರವರ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜವನ್ನು ಜಾಗೃತಗೊಳಿಸುವ ಕನಕದಾಸರ ಕೀರ್ತನೆಗಳು ಸರ್ವಕಾಲಿಕವಾಗಿದೆ. ಓನಕೆ ಒಬವ್ವ ಅವರ ಪರಾಕ್ರಮ ಸದಾ ಸ್ಮರಣೀಯ ಎಂದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದುಂಡಪ್ಪ ಗೂಳೂರು ಅವರನ್ನು ತಾಲೂಕಾಡಳಿತದಿಂದ ಸನ್ಮಾನಿಸಲು ಅತೀವ ಅಭಿಮಾನವೆನಿಸುತ್ತದೆ. ಜೀವನದಲ್ಲಿ ಸಾಕಷ್ಟು ನೊಂದು ಬೆಂದು ಕಲಾಸೇವೆ ಹಾಗೂ ಸಾಹಿತ್ಯ ಸೇವೆಯನ್ನು ಮಾಡಿದ ದುಂಡಪ್ಪ ಗೂಳೂರು ಅವರ ಜೀವನವ್ಯಕ್ತಿತ್ವ ಮತ್ತು ಸವೆಸಿದ ಹಾದಿ ನಮಗೆಲ್ಲರಿಗೂ ಸ್ಪೂರ್ತಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದುಂಡಪ್ಪ ಗೂಳೂರು ಅವರು ಮಾತೃಹೃದಯದ ಪ್ರೀತಿಯನ್ನು ತೋರಿ ಇಲ್ಲಿ ಸನ್ಮಾನಿಸಲಾಗಿರುವುದು ನನಗೆ ಪ್ರೇರಣಾದಾಯಿಯಾಗಿದೆ. ನಾವು ಬದುಕುವುದರ ಜೊತೆಗೆ ಸಮಾಜಕ್ಕಾಗಿ ನಮ್ಮ ಬದುಕನ್ನು ರೂಪಿಸಿಕೊಂಡಾಗ ಮಾತ್ರ ಬದುಕು ಪರಿಪೂರ್ಣವಾಗಲು ಸಾಧ್ಯ. ದಾಂಡೇಲಿಯ ಹಿರಿಯ, ಕಿರಿಯ ಸಾಹಿತಿಗಳು, ಗಣ್ಯ ಮಹನೀಯರು, ನಗರದ ಜನತೆ ತುಂಬು ಹೃದಯದ ಪ್ರೀತಿ ನೀಡಿದ ಕಾರಣ ನನಗೆ ಸಾಹಿತ್ಯ ಮತ್ತು ಕಲಾ ಸೇವೆ ಮಾಡಲು ಸಾಧ್ಯವಾಯಿತೆಂದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿ, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ರಾಘವೇಂದ್ರ ಪಾಟೀಲ್, ಗೋಪಿ ಚೌವ್ಹಾನ್, ಮುಕುಂದ ಬಸವಂತ, ದೀಪಾಲಿ ಪೆಡ್ನೇಕರ, ಗೌಡಪ್ಪ ಬನಕದಿನ್ನಿ, ದಯಾನಂದ ಚಿಟ್ಟಿ, ರವಿ ಕಮ್ಮಾರ್, ಪ್ರಾನ್ಸಿಸ್, ಶ್ರೀಕಾಂತ ಶಾನಬಾಗ್, ಜಾಸ್ಮಿನ್, ಅರ್ಜುನ್, ರಾಮಣ್ಣ, ರುದ್ರಮ್ಮ, ಎಸ್.ಎ. ಸೌದಗಾರ ಹಾಗೂ ದುಂಡಪ್ಪ ಗೂಳೂರು ಅವರ ಸುಪುತ್ರ ಸಂತೋಷ್ ಗೂಳೂರು ಮೊದಲಾದವರು ಉಪಸ್ಥಿತರಿದ್ದರು.