ಜೊಯಿಡಾ: ಡಿಸೆಂಬರ್ 17, 18ರಂದು ಉಳವಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಇಲ್ಲಿನ ದೇವರಾಜ ಅರಸು ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, 17 ವರ್ಷದ ನಂತರ ತಾಲೂಕಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಶ್ರೀಕ್ಷೇತ್ರ ಉಳವಿಯಲ್ಲಿ ನಡೆಯುತ್ತಿರುವುದು ಚೆನ್ನಬಸವಣ್ಣನ ಆಶೀರ್ವಾದ. ಉತ್ತಮವಾಗಿ ಕಾರ್ಯಕ್ರಮವನ್ನು ಮಾಡೋಣ, ಎಲ್ಲರ ಸಹಕಾರ ಅಗತ್ಯ ಎಂದರು.
ಉಳವಿ ಟ್ರಸ್ಟ್ ಕಮಿಟಿ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಮಾತನಾಡಿ, ಉಳವಿಯಲ್ಲಿ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಉಳವಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರ ಸಹಕಾರವನ್ನು ನಮ್ಮ ಟ್ರಸ್ಟ್ ಕಮಿಟಿ ಮತ್ತು ಗ್ರಾಮ ಪಂಚಾಯತ ವತಿಯಿಂದ ನೀಡುತ್ತೇವೆ ಎಂದರು.
ಸಭೆಯಲ್ಲಿ ಕಾರ್ಯಕ್ರಮಕ್ಕೆ ಆಗಬಹುದಾದ ಖರ್ಚು ವೆಚ್ಚ, ಸಾರಿಗೆ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಸ್ಥಳೀಯ ಜನರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.
ವೇದಿಕೆಯಲ್ಲಿ ತಹಶೀಲ್ದಾರ ಶೈಲೇಶ್ ಪರಮಾನಂದ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಗ್ರಾ.ಪಂ. ಅಧ್ಯಕ್ಷ ಅರುಣ ಕಾಂಬ್ರೆಕರ, ಉಳವಿ ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ಮೊಕಾಶಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ್ ಇತರರು ಉಪಸ್ಥಿತರಿದ್ದರು.