ಹೊನ್ನಾವರ: ಬಹು ವರ್ಷದ ತಾಲೂಕಿನ ಜನತೆಯ ಬೇಡಿಕೆಯಾದ ಹೊನ್ನಾವರ- ತಾಳಗುಪ್ಪಾ ರೈಲು ಮಾರ್ಗಕ್ಕಾಗಿ ಪುನಃ ಹೋರಾಟ ಆರಂಭಿಸಲು ಮುಂದಾಗಿದ್ದು, ಸಮಾಲೋಚನಾ ಸಭೆ ಜರುಗಿತು.
ಉತ್ತರಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ರಚಿಸಿಕೊಂಡು ನ್ಯಾಯಾಲಯದಲ್ಲಿ ಮತ್ತು ಕೇಂದ್ರ, ರಾಜ್ಯ ಸರಕಾರಗಳಲ್ಲಿ ಹೋರಾಟ ನಡೆಸಿ, ಗೆಲುವು ಪಡೆಯುತ್ತಿರುವ ಮಿಲಾಗ್ರೀಸ್ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಮತ್ತು ಸಂಚಾಲಕ ರಾಜೀವ ಗಾಂವ್ಕರ್ ಇವರ ಮಾರ್ಗದರ್ಶನದಲ್ಲಿ ನಿರಂತರ ಹೋರಾಟ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಜಾರ್ಜ್ ಫರ್ನಾಂಡೀಸ್ ಆರಂಭದಲ್ಲಿ ಸ್ವಾಗತಿಸಿ, ಜಿಲ್ಲಾ ಮಟ್ಟದಲ್ಲಿ ನಾವು ಹೋರಾಟ ನಡೆಸಿ ಹಲವು ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದೇವೆ. ಜಿಲ್ಲೆಯ ರಾಜಕಾರಣಿಗಳು ಬೆಂಬಲ ನೀಡಿದ್ದಾರೆ. ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗದ ಹೋರಾಟಕ್ಕೆ ಭಾರಿ ಬೆಂಬಲ ದೊರಕಿದೆ. ಹೊನ್ನಾವರ- ತಾಳಗುಪ್ಪಾ ರೈಲು ಮಾರ್ಗ ಆಗಲೇಬೇಕು. ಇದಕ್ಕಾಗಿ ನೀವು ಹೋರಾಟ ನಡೆಸುವುದಾದರೆ ಜಿಲ್ಲಾ ಸಮಿತಿ ಜೊತೆಗಿರುತ್ತದೆ ಎಂದರು.
ರಾಜೀವ ಗಾಂವ್ಕರ್ ಮಾತನಾಡಿ, ಪಿಐಎಲ್ ಹಾಕಿದ ಕಾರಣ ಕೊಂಕಣ ರೈಲ್ವೇಯಿಂದ ಹಲವು ಸೌಲಭ್ಯ ದೊರೆಯಿತು. ತಾಳಗುಪ್ಪಾ ರೈಲ್ವೆಗೂ ಪಿಐಎಲ್ ಹಾಕಲಾಗಿದೆ. ಹೊನ್ನಾವರ- ತಾಳಗುಪ್ಪಾ ಅಂತರ ಕೇವಲ 82.15 ಕಿ.ಮೀ. ಸರ್ವೇ ಮುಗಿದಿದೆ. 2016ರ ರೆಲ್ವೇ ಬಜೆಟ್‌ನಲ್ಲಿ 2.5 ಸಾವಿರ ಕೋಟಿ ಹಣ ಮಂಜೂರಾಗಿ ಹಾಗೆಯೇ ಉಳಿದಿದೆ. ಪರಿಸರವಾದಿಗಳ ಮಾತಿಗೆ ಮರುಳಾಗಬೇಕಿಲ್ಲ. ಜಿಲ್ಲೆ ಮತ್ತು ಮಲೆನಾಡು ಅಭಿವೃದ್ಧಿಗೆ ಹೊನ್ನಾವರ- ತಾಳಗುಪ್ಪಾ ರೈಲು ಬೇಕು. ನೀವು ಎದ್ದರೆ ಮಾತ್ರ ಸರಕಾರ ಏಳುತ್ತದೆ. ಆದ್ದರಿಂದ ಎಚ್ಚರಾಗಿ ಹೋರಾಟಕ್ಕೆ ಮುಂದಾಗಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಜಿ.ಜಿ.ಶಂಕರ, ವಕೀಲರಾದ ಸುಬ್ರಹ್ಮಣ್ಯ, ವಿಕ್ರಮ, ಜಿ.ಎನ್.ಗೌಡ, ಪತ್ರಕರ್ತರಾದ ಜಿ.ಯು.ಭಟ್, ಕೃಷ್ಣಮೂರ್ತಿ ಹೆಬ್ಬಾರ್, ವಿ.ಕೇರ್ ಸಂಸ್ಥೆಯ ಸ್ಟೀಫನ್ ರೊಡ್ರಗೀಸ್, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಉದಯರಾಜ ಮೇಸ್ತ, ಸತ್ಯ ಜಾವಗಲ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಘವ ಬಾಳೇರಿ, ರಘು ಪೈ ಮತ್ತಿತರರು ಹಾಜರಿದ್ದರು.