ದಾಂಡೇಲಿ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆನ್ನುವ ಹಿತದೃಷ್ಟಿಯಡಿ ಸರಕಾರದಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವ ಕಾರ್ಯ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಿದೆ. ಸೂಕ್ತ ದಾಖಲಾತಿಗಳನ್ನು ಪಡೆದು ಇಂತಿಷ್ಟೆ ದರಕ್ಕೆ ಬಸ್ ಪಾಸ್ ನೀಡಲಾಗುತ್ತದೆ. ಆದರೆ ದಾಂಡೇಲಿಯ ಸಾರಿಗೆ ಘಟಕದವರಿಗೆ ಬಸ್ ಪಾಸ್ ನೀಡುವಂತೆ ಅರ್ಜಿ ಸಲ್ಲಿಸಿ ದಿನಗಳು ಹಲವು ಕಳೆದರೂ ವಿದ್ಯಾರ್ಥಿಗಳಿಗೆ ನಿಗದಿತ ಸಮಯದೊಳಗೆ ಬಸ್ ನೀಡದೇ ಸತಾಯಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರತೊಡಗಿದೆ.
ಅದಕ್ಕೆ ಪುಷ್ಟಿ ನೀಡುವಂತೆ ಇಂದು ಗುರುವಾರ ಬಸ್ ಪಾಸ್‌ಗಾಗಿ ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು ದಾಂಡೇಲಿ ಬಸ್ ನಿಲ್ದಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ದಾಂಡೇಲಿಯಿಂದ ಜೋಯಿಡಾ ಡಿಪ್ಲೋಮ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳ ಹಿಂದೆ ಬಸ್ ಪಾಸಿಗಾಗಿ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದರೂ ಬಸ್ ಪಾಸ್ ನೀಡದೇ ವಿದ್ಯಾರ್ಥಿಗಳಿಗೆ ಸತಾಯಿಸಲಾಗುತ್ತಿದೆ ಎಂದು ಡಿಪ್ಲೋಂ ವಿದ್ಯಾರ್ಥಿ ಅಭಿಷೇಕ್ ಸಂಗಡಿಗರ ದೂರಾಗಿದೆ. ಬಸ್ ಪಾಸ್ ಸಿಗದೆ ಪ್ರತಿದಿನ ಕೈಯಿಂದ ಹಣ ಖರ್ಚು ಮಾಡಿ ಕಾಲೇಜಿಗೆ ಹೋಗಲು ಕಷ್ಟವಾಗುತ್ತಿದೆ. ನಮ್ಮ ಶಿಕ್ಷಣಕ್ಕೆ ತೊಂದರೆಯಾದರೆ ಅದಕ್ಕೆ ಸಾರಿಗೆ ಘಟಕದವರೆ ನೇರ ಹೊಣೆ ಎಂದು ಆರೋಪಿಸಿರುವ ಪಾಸ್ ವಂಚಿತ ವಿದ್ಯಾರ್ಥಿಗಳು, ಬಸ್ ಪಾಸ್ ನೀಡುವವರೆಗೆ ಕಾಲೇಜಿಗೆ ಹೋಗದಿರಲು ನಿರ್ಧಾರವನ್ನು ಕೈಗೊಂಡಿದ್ದಾರೆ.
ಬಸ್ ಪಾಸ್ ವಿತರಣೆಗೆ ಸಂಬಂಧಪಟ್ಟಂತೆ ಇದ್ದ ಅಧಿಕಾರಿಯು ನಿವೃತ್ತರಾಗಿರುವುದರಿಂದ ಹೊಸ ಅಧಿಕಾರಿ ಈಗಾಗಲೆ ನಿಯೋಜನೆಗೊಂಡಿದ್ದಾರೆ. ಒಂದೆರಡು ದಿನಗಳೊಳಗೆ ಬಸ್ ಪಾಸ್ ನೀಡಲು ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬಸ್ ಪಾಸ್ ನೀಡಲು ಸತಾಯಿಸುತ್ತಿರುವ ಸಾರಿಗೆ ಸಂಸ್ಥೆ; ವಿದ್ಯಾರ್ಥಿಗಳ ಆರೋಪ
