Slide
Slide
Slide
previous arrow
next arrow

ವ್ಯಾಪಾರ ಮಳಿಗೆಗಳ ಹರಾಜು ಪ್ರಕ್ರಿಯೆ: ಟೆಂಡರ್ ಬೆಲೆಗೆ ಅಧಿಕಾರಿಗಳೇ ಅಚ್ಚರಿ

300x250 AD

ಕಾರವಾರ: ನಗರದ ಹಿಂದೂ ಹೈ ಸ್ಕೂಲ್ ಮುಂಭಾಗ ನಗರಸಭೆ ವತಿಯಿಂದ ನಿರ್ಮಿಸಿದ ವ್ಯಾಪಾರ ಮಳಿಗೆಗಳ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. ಹರಾಜಿನಲ್ಲಿ ಬೇಕಾಬಿಟ್ಟಿ ಬೆಲೆಗೆ ಮಳಿಗೆಗಳ ಟೆಂಡರನ್ನ ಪಡೆದಿದ್ದು ನಗರಸಭೆ ಅಧಿಕಾರಿಗಳೇ ಅಚ್ಚರಿ ಪಡುವಂತಾಯಿತು.
ನಗರಸಭೆ ವತಿಯಿಂದ ಹಿಂದೂ ಸ್ಕೂಲ್ ಬಳಿ ಒಟ್ಟು 9 ಮಳಿಗೆಗಳನ್ನ ನಿರ್ಮಿಸಲಾಗಿದ್ದು, ಅದರಲ್ಲಿ ವಿಕಲ ಚೇತನರಿಗೆ ಮೀಸಲಿಟ್ಟ ಮಳಿಗೆ ಹೊರತು ಪಡಿಸಿ ಒಟ್ಟು 8 ಮಳಿಗೆಗಳಿಗೆ ಹರಾಜು ಪ್ರಕ್ರಿಯೆಯನ್ನ ನಡೆಸಲಾಯಿತು. 8 ಮಳಿಗೆಗಳಿಗೆ ಟೆಂಡರ್ ಪಡೆಯಲು ಒಟ್ಟು 118 ಜನರು ನಗರಸಭೆಯಲ್ಲಿ 50 ಸಾವಿರ ರೂಪಾಯಿ ಹಣವನ್ನ ಡಿಪಾಸಿಟ್ ಇಟ್ಟು ಅರ್ಜಿಯನ್ನ ಸಲ್ಲಿಸಿದ್ದರು. 100 ಚದುರ ಅಡಿ ಮಳಿಗೆಗೆ 5700 ರೂಪಾಯಿ, 110 ಚದುರ ಅಡಿಗೆ 5900 ಹಾಗೂ 121 ಚದುರ ಅಡಿ ಮಳಿಗೆಗೆ 6200 ರೂಪಾಯಿ ನಗರಸಭೆ ದರವನ್ನ ನಿಗದಿ ಮಾಡಲಾಗಿತ್ತು.
ಮೊದಲು ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಮಳಿಗೆಗೆ ಹರಾಜು ಪ್ರಕ್ರಿಯೆಯನ್ನ ಅಧಿಕಾರಿಗಳು ನಡೆಸಿದರು. ಇದರಲ್ಲಿ ಮಳಿಗೆಗೆ 24 ಸಾವಿರ ರೂಪಾಯಿಗೆ ಹರಾಜಾಗುವ ಮೂಲಕ ಎಲ್ಲರು ಅಚ್ಚರಿ ಪಡುವಂತಾಯಿತು. ಜಿ.ಎಸ್.ಟಿ ಸೇರಿ ಅಂದಾಜು ಮಾಸಿಕ 30 ಸಾವಿರ ರೂಪಾಯಿ ಬಾಡಿಗೆಯನ್ನ ನಗರಸಭೆಗೆ ತುಂಬುವಂತಾಯಿತು. ಇದಾದ ನಂತರ ಸಾಮಾನ್ಯವರ್ಗದ ಹರಾಜಿನಲ್ಲಿ ಮಳಿಗೆಯೊಂದಕ್ಕೆ ಗರಿಷ್ಟ 29 ಸಾವಿರ ರೂಪಾಯಿಗೆ ಹರಾಜಾದರೆ, ಕನಿಷ್ಟ 21 ಸಾವಿರ ರೂಪಾಯಿಗೆ ಮಳಿಗೆಯೊಂದು ಹರಾಜಾಯಿತು.
ಸದ್ಯ ಹರಾಜು ಪಡೆದವರಿಂದ ಒಟ್ಟು ಎಂಟು ಮಳಿಗೆಗಳಿಂದ ನಗರಸಭೆಗೆ ಮಾಸಿಕ 1.64 ಲಕ್ಷ ಬಾಡಿಗೆ ಬರುವಂತಾಗಿದ್ದು ಸಣ್ಣ ಮಳಿಗೆಗೆ ಇಷ್ಟೊಂದು ಗರಿಷ್ಟ ಪ್ರಮಾಣದಲ್ಲಿ ಹರಾಜಾದ ಮೊದಲ ಪ್ರಕರಣ ನಗರದಲ್ಲಿ ಇದಾಗಿದೆ ಎನ್ನುವ ಚರ್ಚೆಯನ್ನ ಸಾರ್ವಜನಿಕರು ಮಾಡಿದರು.
ಮೂರು ಮಳಿಗೆ ವಾಪಾಸ್
ಈ ಹಿಂದೆ ನಗರದ ಮೀನು ಮಾರುಕಟ್ಟೆ ಬಳಿ ನಿರ್ಮಿಸಿದ ನಗರಸಭೆ ಮಳಿಗೆ ಹರಾಜು ಪ್ರಕ್ರಿಯೆ ಸಹ ಇದೇ ರೀತಿ ದುಬಾರಿ ಬೆಲೆಗೆ ನಗರಸಭೆಯ ಮಳಿಗೆಗಳನ್ನ ಹರಾಜಿನಲ್ಲಿ ಕೆಲವರು ಪಡೆದಿದ್ದರು.
ಇದರಲ್ಲಿ ಮೂವರು ತಮಗೆ ಮಾಸಿಕ ಹೆಚ್ಚು ಹಣ ಬಾಡಿಗೆ ಕೊಡಲು ಸಾಧ್ಯವಿಲ್ಲ ಎಂದು ಹರಾಜನ್ನ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ. ಎರಡು ಬಾರಿ ಹರಾಜು ನಡೆಸಿ ಎರಡನೇ ಬಾರಿ ತೆಗೆದುಕೊಂಡವರು ತಮಗೆ ದುಬಾರಿ ಬೆಲೆಗೆ ಮಳಿಗೆ ನಡೆಸುವುದು ಕಷ್ಟ ಎನ್ನುವ ನಿಟ್ಟಿನಲ್ಲಿ ವಾಪಾಸ್ ಬಿಟ್ಟಿದ್ದು ಹರಾಜಿನಲ್ಲಿ ಮಳಿಗೆ ಪಡೆದವರ ಪರಿಸ್ಥಿತಿಯೂ ಇದೇ ರೀತಿ ಆಗಲಿದೆ ಎನ್ನುವ ಚರ್ಚೆಯನ್ನ ಸಾರ್ವಜನಿಕರು ಮಾಡುವಂತಾಯಿತು.
ಜಿ.ಎಸ್.ಟಿ ಸೇರಿ ಮಾಸಿಕ 30 ಸಾವಿರ ರೂಪಾಯಿ ಸಣ್ಣ ಮಳಿಗೆಗೆ ಬಾಡಿಗೆ ನೀಡಿದರೆ ಅದರಲ್ಲಿ ವ್ಯಾಪಾರವಾದರು ಏನು ಮಾಡಲು ಸಾಧ್ಯ, ಮಳಿಗೆ ಪಡೆಯಲೇ ಬೇಕು ಎಂದು ಮನಬಂದಂತೆ ಬಾಡಿಗೆಯನ್ನ ಏರಿಸಿ ಪಡೆದರೆ ಭವಿಷ್ಯದಲ್ಲಿ ಸಮಸ್ಯೆಗೆ ಸಿಲುಕುವ ಸಾಧ್ಯತೆಯೂ ಇದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತು.

300x250 AD
Share This
300x250 AD
300x250 AD
300x250 AD
Back to top