Slide
Slide
Slide
previous arrow
next arrow

ವಾಮನಾಶ್ರಮ ಸ್ವಾಮಿಗಳಿಗೆ ಅದ್ಧೂರಿ ಸ್ವಾಗತ

300x250 AD

ಕುಮಟಾ: ಕಾಶಿಯಲ್ಲಿ ವೈಶ್ಯವಾಣಿ ಸಮಾಜದ ಮೂಲ ಕುಲಗುರು ಮಠದ ಪುನರ್ ನಿರ್ಮಾಣಕ್ಕಾಗಿ ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು ಕೇರಳದಿಂದ ಆರಂಭಿಸಿರುವ ಪಾದಯಾತ್ರೆ ಮಂಗಳವಾರ ಪಟ್ಟಣಕ್ಕೆ ತಲುಪುತ್ತಿದ್ದಂತೆ ಇಲ್ಲಿನ ಸಮಾಜ ಬಾಂಧವರು ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಿದರು.
ಕಾಶಿಯಲ್ಲಿ ವೈಶ್ಯವಾಣಿ ಸಮಾಜದ ಮೂಲ ಕುಲಗುರು ಮಠದ ಪುನರ್ ನಿರ್ಮಾಣಕ್ಕಾಗಿ ಮತ್ತು ಆದಿ ಶಂಕರಾಚಾರ್ಯರ ತತ್ವಗಳ ಪ್ರಚಾರದ ನಿಮಿತ್ತ ಹೊನ್ನಾವರದ ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು ಕೇರಳದಿಂದ ಕೈಗೊಂಡ ಪಾದಯಾತ್ರೆ ಕುಮಟಾಕ್ಕೆ ತಲುಪಿದೆ. ಪಟ್ಟಣದ ಹೊನ್ಮಾವ್ ಕ್ರಾಸ್ ಬಳಿಯ ವೈಶ್ಯವಾಣಿ ಸಭಾಭವನಕ್ಕೆ ಆಗಮಿಸಿದ ಶ್ರೀಗಳನ್ನು ಸಮಾಜದ ಮಹಿಳೆಯರು ಪೂರ್ಣಕುಂಭದ ಸ್ವಾಗತದೊಂದಿಗೆ ಭಕ್ತಿಯಿಂದ ಬರಮಾಡಿಕೊಂಡರು. ಬಳಿಕ ವೈಶ್ಯವಾಣಿ ಸಮಾಜದ ಪ್ರಮುಖರು ಶ್ರೀಗಳ ಪಾದ ಪೂಜೆ ನೆರವೇರಿಸಿ, ಆಶೀರ್ವಾದ ಪಡೆದರು. ಬಳಿಕ ವಿವಿಧ ದೈವಿ ಕೈಂಕರ್ಯಗಳು ಸಾಂಗವಾಗಿ ಜರುಗಿದವು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಸೇರಿದಂತೆ ಇತರೆ ಜನಪ್ರತಿನಿಧಿಗಳು ಮತ್ತು ಗಣ್ಯರು ಶ್ರೀಗಳ ಆಶೀರ್ವಾದ ಪಡೆದರು. ಸುಮಾರು 500 ವರ್ಷಗಳ ಪ್ರಾಚೀನ ಕುಲಗುರು ಸಂಪ್ರದಾಯವನ್ನು ವೈಶ್ಯವಾಣಿ ಸಮಾಜ ಹೊಂದಿದೆ. ಆದಿಶಂಕರರು ನಾಲ್ಕು ದಿಕ್ಕುಗಳಲ್ಲಿ ಪೀಠ ಸ್ಥಾಪಿಸಿ, ಹಿಂದು ಧರ್ಮ, ಸಂಸ್ಕೃತಿಯನ್ನು ಪ್ರಚಾರಕ್ಕೆ ಅನುವುಮಾಡಿಕೊಟ್ಟ ಸಮಯದಲ್ಲಿ ವೈಶ್ಯವಾಣಿ ಸಮಾಜದ ಕುಲಗುರುಗಳಿಗೆ ಅನುಮತಿ ದೊರೆತಿತ್ತು. ಉತ್ತರಭಾರತದಿಂದ ಕರ್ನಾಟಕಕ್ಕೆ ವಲಸೆಬಂದ ಸಮಾಜದವರಿಗೆ ಗುರುಮಠದ ಸ್ಥಾಪನೆಗೆ ಕೆಳದಿ ರಾಜವಂಶಸ್ಥರು ಅವಕಾಶ ಮಾಡಿಕೊಟ್ಟಿದರು. ಹೊನ್ನಾವರದ ಹಳದೀಪುರದಲ್ಲಿ ಭೂಮಿ ನೀಡಿ, ಮಠ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದರು.
ಸುದೀರ್ಘ ವರ್ಷಗಳ ಗುರುಪರಂಪರೆ ಹೊಂದಿರುವ ವೈಶ್ಯವಾಣಿ ಸಮಾಜದ ಮೂಲ ಕುಲಗುರು ಮಠದ ಪುನರ್ ನಿರ್ಮಾಣದ ಸಂಕಲ್ಪ ಮಾಡಿರುವ ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು ವಿಜಯದಶಮಿಯಂದು ಕೇರಳದ ಕಾಲಡಿಯಿಂದ ಪಾದ ಯಾತ್ರೆ ಆರಂಭಿಸಿದ್ದಾರೆ. 3 ಸಾವಿರ ಕಿಮೀ ಅಂತರದ ಪಾದ ಯಾತ್ರೆಯಲ್ಲಿ ಶ್ರೀಗಳು ಈಗಾಗಲೇ ಸರಿಸುಮಾರು 600 ಕಿಮೀ ಕ್ರಮಿಸಿದ್ದು, ಇಂದು ಕುಮಟಾ ತಲುಪಿದೆ. 200 ದಿನಗಳ ಸಂಕಲ್ಪ ಪಾದ ಯಾತ್ರೆ ಅಕ್ಷಯ ತತ್ರೀಯದಂದು ಕೊನೆಗೊಳ್ಳಲಿದೆ. ಪ್ರತಿನಿತ್ಯ 25 ಕಿಮೀ ಕ್ರಮಿಸುವ ಶ್ರೀಗಳು ಅಲ್ಲಿಯೇ ವಿಶ್ರಾಂತಿ ಪಡೆದು, ಮಾರನೇ ದಿನ ತಮ್ಮ ಪಾದಯಾತ್ರೆ ಮುಂದುವರೆಸುತ್ತಾರೆ.
ಪಟ್ಟಣಕ್ಕೆ ಆಗಮಿಸಿದ ಶ್ರೀಗಳು ಹೊನ್ಮಾವ್ ಕ್ರಾಸ್ ಬಳಿಯ ವೈಶ್ಯವಾಣಿ ಸಭಾಭವನದಲ್ಲಿ ತಂಗಿದ್ದು, ನಾಳೆಯ ಮುಂದಿನ ಪ್ರಯಾಣ ಮುಂದುವರೆಸಲಿದ್ದಾರೆ. ಸಂಜೆ ಶ್ರೀಗಳಿಂದ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಪ್ರವಚನ ನಡೆಯಲಿದೆ. ಈ ಸಂದರ್ಭದಲ್ಲಿ ವೈಶ್ಯವಾಣಿ ಸಮಾಜದ ತಾಲೂಕು ಅಧ್ಯಕ್ಷ ದಿನೇಶ ವಾಳ್ವೆ, ಪ್ರಮುಖರಾದ ಕಿಶನ ವಾಳ್ಕೆ, ನಾಗರಾಜ ಶೇಟ್, ಪ್ರಕಾಶ ಶೇಟ್, ವಸಂತ ವಾಳ್ಕೆ, ಉದಯ ಶೇಟ್, ಪ್ರೇಮಾನಂದ ಶೇಟ್, ಜ್ಯೋತಿ ಶೇಟ್, ವಿನೋದ ನೇವಗಿ ಸೇರಿದಂತೆ ಸಮಾಜದ ನೂರಾರು ಸಮಾಜಬಾಂಧವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top