ಕಾರವಾರ: ಅಸ್ನೋಟಿಕರ್ ಕುಟುಂಬಕ್ಕೆ ಅವಶ್ಯಕತೆ ಇದ್ದಾಗ ಅವರ ಬೆನ್ನಿಗೆ ಚೂರಿ ಹಾಕಿ ಪಲಾಯನವಾಗಿ ಸತೀಶ್ ಸೈಲ್ ಜೊತೆ ಸೇರಿಕೊಂಡವರು ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಎಂದು ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತಿ ಸದಸ್ಯ ನಂದಕಿಶೋರ ನಾಯಕ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಅವರಿಗೆ ಅವರಿಗೆ ವಯಸ್ಸಾಗಿದೆ. ಹೀಗಾಗಿ ಅವರಿಗೆ ಮುಡಗೇರಿ, ಅಸ್ನೋಟಿ, ಮಾಜಾಳಿ ಹಾಗೂ ಚಿತ್ತಾಕುಲಾ ಪಂಚಾಯತಿಗಳ ವ್ಯಾಪ್ತಿ ತಿಳಿದಿಲ್ಲ, ಶಂಭು ಶೆಟ್ಟರಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಸತೀಶ್ ಸೈಲ್ ಜೊತೆ ಶಂಭು ಶೆಟ್ಟರ ಮುಖ ನೋಡಿ ಹಲವರು ಹೋಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಶಂಭು ಶೆಟ್ಟಿಯವರು ಮಾಜಿ ಶಾಸಕ ಸತೀಶ್ ಸೈಲ್ ಅವಧಿಯಲ್ಲಿ ಮುಡಗೇರಿ ಪಂಚಾಯತಿ ಅಭಿವೃದ್ಧಿಯ ಪರ್ವಕಾಲದಲ್ಲಿ ಮೆರೆದಿತ್ತು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ಆ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಮುಡಗೇರಿ ಪಂಚಾಯತಿಯಿಂದ ಹೊರಗಿನದ್ದು. ಶಾಸಕಿ ರೂಪಾಲಿ ನಾಯ್ಕ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗಿದೆ. ಹೀಗಾಗಿ ನಾವು ಅವರನ್ನು ಬೆಂಬಲಿಸುತ್ತೇವೆ ಎಂದರು.
ಶಾಸಕರಾದಾಗ ಸತೀಶ್ ಸೈಲ್ ಜೊತೆಯಲ್ಲೇ ನಾನಿದ್ದೆ. ಅಂದು ಏನೆಲ್ಲ ಆಗಿದ್ದವು ಎಂಬುದು ನನಗೆ ತಿಳಿದಿದೆ. ಮುಡಗೇರಿಯ ಭೂಸ್ವಾಧೀನ ಪ್ರಕರಣದಲ್ಲಿ ಜನರಿಗೆ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನವನ್ನೇ ಮಾಡಿಲ್ಲ. ಆದರೆ ಈಗ ಶಾಸಕಿಯವರು ಗುಂಟೆಗೆ ಒಂದು ಲಕ್ಷ ಸರ್ಕಾರದಿಂದ ಕೊಡಿಸುತ್ತೇವೆ ಎಂದಾಗ ನಾವು ಎರಡು ಲಕ್ಷ ಕೊಡಿಸುತ್ತೇವೆ ಎಂದು ಜನರಿಗೆ ಫೋನ್ ಮಾಡಿ ಹೇಳುತ್ತಾರೆ. ಇವರು ಎರಡು ಲಕ್ಷ ಪರಿಹಾರ ಎಲ್ಲಿಂದ ಕೊಡಿಸುತ್ತಾರೆ ಎಂದು ಪ್ರಶ್ನಿಸಿದರು. ಸುಳ್ಳು ಹೇಳುವುದು ಶಂಭು ಶೆಟ್ಟಿ ಹಾಗೂ ಸತೀಶ್ ಸೈಲ್‌ಗೆ ಅಭ್ಯಾಸ ಆಗಿಹೋಗಿದೆ. ಯುವಜನರಿಗೆ ಉದ್ಯೋಗ ಕೊಡಿಸುತ್ತೇವೆಂದು ಶಾಸಕರಾಗುವ ಮುಂಚೆ ಹೇಳಿದ್ದರು. ಆದರೆ ಅವರು ಮಾಡಿದ್ದೇನೂ ಇಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೂ ನಾನು ಸಿದ್ಧನಿದ್ದೇನೆ ಎಂದರು.
ಇನ್ನೋರ್ವ ಸದಸ್ಯ ಸುರೇಂದ್ರ ಗಾಂವಕರ್ ಮಾತನಾಡಿ, ಮುಡಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 73 ಎಕರೆ ಜಾಗ ಭೂಸ್ವಾಧೀನಗೊಂಡು 23 ವರ್ಷಗಳಾಗಿದೆ. ಆದರೆ ಇತ್ತೀಚಿಗೆ ಶಾಸಕಿ ರೂಪಾಲಿ ನಾಯ್ಕರವರು ಸಭೆ ನಡೆಸಿ, ಭೂಸ್ವಾಧೀನಗೊಂಡವರಿಗೆ ಪ್ರತಿ ಗುಂಟೆಗೆ ಒಂದು ಲಕ್ಷ ಕೊಡುವುದಾಗಿ ಭರವಸೆ ನೀಡಿದರು. ಆದರೆ ಈ ಹಿಂದೆಲ್ಲ ಸಾಕಷ್ಟು ಜನ ಶಾಸಕರಾಗಿ ಹೋದವರು ಒಂದೇ ಒಂದು ಸಭೆಯನ್ನು ಮುಡಗೇರಿ ಪಂಚಾಯತಿಯಲ್ಲಿ ನಡೆಸಿಲ್ಲ. 23 ವರ್ಷಗಳಾದರೂ ನಮ್ಮ ಜನರಿಗೆ ಪರಿಹಾರ ಕೊಡಿಸಲು ಮಾಜಿ ಶಾಸಕರು ಏನು ಮಾಡಿದ್ದಾರೆ? ನಿಮ್ಮ ಐದು ವರ್ಷದ ಅವಧಿಯಲ್ಲೇ ಎರಡು- ಮೂರು ಲಕ್ಷ ಕೊಡಬೇಕಿತ್ತು. ಆದರೆ ಈಗ ಶಾಸಕಿ ಒಂದು ಲಕ್ಷ ಕೊಡುವುದನ್ನ ಪಡೆಯಬೇಡಿ ಎನ್ನುತ್ತಾರೆ ಎಂದರು.
ನಾನು ಈ ಹಿಂದೆ ಸತೀಶ್ ಸೈಲ್ ಅವರಿಗಾಗಿ ಬೆಂಬಲಿಸಿದ್ದೆವು. ಆದರೆ ಅವರು ಏನೂ ಮಾಡಿಲ್ಲ. ನಾನು ತಾಲೂಕು ಪಂಚಾಯತಿಯಿಂದ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಿದ್ದೆ ಹೊರತು ಕಾಂಗ್ರೆಸ್‌ನಿಂದಲ್ಲ. ಅವರ ಮೇಲಿನ ಅಭಿಮಾನಕ್ಕೆ ಅಂದು ಕೆಲಸ ಮಾಡಿದ್ದೆವು. ಆದರೆ ಮುಡಿಗೇರಿ ಪಂಚಾಯತಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಡಗೇರಿ ಪಂಚಾಯತ್ ಅಧ್ಯಕ್ಷೆ ಸೀಮಾ ಗೋಕುಲದಾಸ ನಾಯ್ಕ, ಉಪಾಧ್ಯಕ್ಷ ಸುನೀಲ್ ಗೋಯಾರ್ ನಾಯ್ಕ, ಸದಸ್ಯರಾದ ಮೆಲಿಂಡಾ ಬಸ್ತ್ಯಾವ್ ಡಿಸೋಜಾ, ಜ್ಯೋತಿ ವೆಂಕಟೇಶ ಉಪಸ್ಥಿತರಿದ್ದರು.
ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಪಲಾಯನವಾದಿ: ನಂದಕಿಶೋರ ನಾಯಕ ಟೀಕೆ
