ಕಾರವಾರ: ಮೂರು ವರ್ಷಗಳ ಹಿಂದಿನ ಬನವಾಸಿ ಕದಂಬೋತ್ಸವದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಿಸಿಕೊಂಡು ಜಿಲ್ಲಾಡಳಿತ ಬಿಲ್ ಪಾವತಿಸದೆ ಸತಾಯಿಸುತ್ತಿದೆ. ಇದೀಗ ಕರಾವಳಿ ಉತ್ಸವ ಮಾಡಲು ಮುಂದಾಗಿದ್ದು, ಮೊದಲು ಕದಂಬೋತ್ಸವದ ಬಿಲ್ ಪಾವತಿಸಿ ಬಳಿಕ ಉಳಿದ ಉತ್ಸವ ಮಾಡಿ. ಇಲ್ಲದಿದ್ದರೆ ಪ್ರತಿಭಟನೆ ಎದುರಿಸಬೇಕಾದೀತು ಎಂದು ಶಾಮಿಯಾನ ಅಸೋಸಿಯೇಶನ್ಸ್ ಹಾಗೂ ಕರುನಾಡ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎನ್.ದತ್ತಾ, ಬನವಾಸಿಯ ಕದಂಬೋತ್ಸವದಲ್ಲಿ ಕಾರವಾರ ಶಾಮಿಯಾನ ಸೌಂಡ್ಸ್ ಆ್ಯಂಡ್ ಡೆಕೋರೇಟರ್ಸ್ ಅಸೋಸಿಯೇಶನ್ಸ್ ಅಧ್ಯಕ್ಷ ಪ್ರಶಾಂತ ಸಾವಂತ ಅವರು ಶಾಮಿಯಾನದ ವ್ಯವಸ್ಥೆ ಮಾಡಿದ್ದರು. ಆ ಕಾರ್ಯಕ್ರಮಕ್ಕೆ ನಂದಕುಮಾರ್ ಎನ್ನುವವರಿಗೆ ಟೆಂಟರ್ ಆಗಿದ್ದರೂ, ಮುಖ್ಯಮಂತ್ರಿಗಳು ಬರುತ್ತಾರೆಂದು ಹೆಚ್ಚಿನ ಶಾಮಿಯಾನದ ವ್ಯವಸ್ಥೆಗೆ ಯಾರೂ ಸಿಗದಿದ್ದಾಗ ಪ್ರಶಾಂತ್ ಅವರಿಗೆ ಆರ್.ಪಿ.ನಾಯ್ಕರವರು ಸೂಚಿಸಿದ್ದರು. ಅದರಂತೆ ವ್ಯವಸ್ಥೆ ಮಾಡಿದ್ದ ಅವರಿಗೆ ಬಿಲ್ ಪಾವತಿಯಾಗಿಲ್ಲ. ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಬದಲಾಗುತ್ತಿದ್ದು, ಲಕ್ಷಗಟ್ಟಲೆ ಬಿಲ್ ಪಾವತಿ ಮಾಡುವುದು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ ಎಂದರು.
ಸದ್ಯ ಕಾರವಾರದಲ್ಲಿ ಕರಾವಳಿ ಉತ್ಸವ ನಿಗದಿ ಮಾಡಲಾಗಿದೆ. ಕದಂಬೋತ್ಸವದ ಶಾಮಿಯಾನದ ಹಣ ಅಷ್ಟರೊಳಗೆ ಪಾವತಿ ಮಾಡದಿದ್ದರೆ ಕರಾವಳಿ ಉತ್ಸವದ ಸಮಯದಲ್ಲೇ ವಿನೂತನವಾಗಿ ಹಣವನ್ನ ಬೇಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಮಿಯಾನ ಅಸೋಸಿಯೇಶನ್ಸ್ ಅಧ್ಯಕ್ಷ ಪ್ರಶಾಂತ ಸಾವಂತ ಮಾತನಾಡಿ, ಶಿರಸಿಯ ಕದಂಬೋತ್ಸವಕ್ಕೆ ಬೇರೊಬ್ಬರಿಗೆ ಟೆಂಡರ್ ಆಗಿತ್ತು. ಅವರು ಟೆಂಡರ್‌ನಂತೆ ಶಾಮಿಯಾನದ ವ್ಯವಸ್ಥೆ ಮಾಡಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರುತ್ತಾರೆಂದು ಹೆಚ್ಚುವರಿ ಶಾಮಿಯಾನ ಹಾಕಲು ನಗರಸಭೆಯ ಪೌರಾಯುಕ್ತ ಆರ್.ಪಿ.ನಾಯ್ಕ ಅವರಿಗೆ ಅಂದಿನ ಜಿಲ್ಲಾಧಿಕಾರಿ ಹರೀಶಕುಮಾರ್ ಸೂಚಿಸಿದ್ದರು. ಅದರಂತೆ ಆರ್.ಪಿ.ನಾಯ್ಕ ಅವರು ನನಗೆ ತಿಳಿಸಿದ್ದರಿಂದ ಸೋಫಾ, ಜನರೇಟರ್, ಖುರ್ಚಿ ಇನ್ನಿತರ ವ್ಯವಸ್ಥೆಯನ್ನು ಮಾಡಿದ್ದೆ. ಜಿಲ್ಲಾಧಿಕಾರಿ ಕಚೇರಿಗೆ ಬಿಲ್ ನೀಡಲು ಮುಂದಾದಾಗ ಶಾಮಿಯಾನ ಟೆಂಡರ್ ಆಗಿದ್ದ ನಂದಕುಮಾರ್ ಅವರಿಗೆ ಬಿಲ್ ನೀಡಲು ಸೂಚಿಸಿದ್ದರು. ಬಿಲ್ ಎಲ್ಲವನ್ನು ಅವರಿಗೆ ನೀಡಿದ್ದು, ಈವರೆಗೆ ನನಗೆ ಪಾವತಿಯಾಗಬೇಕಿರುವ ಸುಮಾರು 10 ಲಕ್ಷ ರೂ. ಪಾವತಿಯಾಗಿಲ್ಲ ಎಂದು ಅಳಲು ತೋಡಿಕೊಂಡರು.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅನೇಕ ಬಾರಿ ಮನವಿ ಸಲ್ಲಿಸಿದ್ದೇನೆ. ಸಚಿವ ಶಿವರಾಮ ಹೆಬ್ಬಾರ್, ಕೋಟ ಶ್ರೀನಿವಾಸ್ ಪೂಜಾರಿ ಅವರನ್ನೂ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೆ. ಆದರೆ ಈವರೆಗೂ ಬಿಲ್ ಪಾವತಿಯಾಗಿಲ್ಲ. ಪ್ರತಿದಿನ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವುದು ಬಿಟ್ಟರೆ ಬೇರೇನೂ ಆಗುತ್ತಿಲ್ಲ. ನೂರಾರು ಕಾರ್ಮಿಕರಿಗೆ ನಾನು ಕೂಲಿ ಪಾವತಿಸಿಲ್ಲ. ಸ್ನೇಹಿತರಿಂದ ಪಡೆದಿದ್ದ ಕೆಲವು ಮೆಟಿರಿಯಲ್ಸ್ಗಳ ಹಣವನ್ನೂ ಪಾವತಿ ಮಾಡಬೇಕಿದ್ದು, ಅವರು ಮನೆಗೆ, ಕಚೇರಿಗೆ ಬಂದು ಕೂರುತ್ತಿದ್ದಾರೆ. ಸಾಲಸೋಲ ಮಾಡಿ ಶಾಮಿಯಾನದ ವ್ಯವಸ್ಥೆ ಮಾಡಿದ್ದು, ಮೂರು ವರ್ಷವಾದರೂ ಜಿಲ್ಲಾಡಳಿತ ಬಿಲ್ ಪಾವತಿಸದೆ ಸತಾಯಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.