ಕಾರವಾರ: ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಕಂಪನಿಯವರು ಮಣಿದಿದ್ದು, ಪ್ರತಿ ಟನ್‌ಗೆ 150 ರೂ. ಹೆಚ್ಚು ಪಾವತಿಸಲು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಕಳೆದ 43 ದಿನಗಳಿಂದ ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಪ್ರತಿ ಟನ್ ಗೆ ಹೆಚ್ಚುವರಿ ಹಣ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದು ಈ ಹಿನ್ನಲೆಯಲ್ಲಿ ಸಕ್ಕರೆ ನಿರ್ದೇಶನಾಲಯದ ಆಯುಕ್ತರ ಸಮ್ಮುಖದಲ್ಲಿ ಮಂಗಳವಾರ ಅಧಿಕಾರಿಗಳ ಹಾಗೂ ರೈತರ ಸಭೆಯನ್ನ ನಡೆಸಲಾಯಿತು. ಸಭೆಯಲ್ಲಿ ರೈತರು ಕಳೆದ ಬಾರಿ ಇಐಡಿ ಪ್ಯಾರಿ ಸಕ್ಕರ ಕಾರ್ಖಾನೆಯಿಂದ 2592 ರೂಪಾಯಿ ಹಣವನ್ನ ನೀಡಲಾಗುತ್ತಿತ್ತು. ಕೊರೋನಾ ನಂತರ ಬೆಲೆ ಏರಿಕೆಯಾಗಿದ್ದು ಟನ್ ಗೆ ಹೆಚ್ಚಿನ ಹಣವನ್ನ ಕೊಡಬೇಕಿತ್ತು. ಆದರೆ ಟನ್‌ಗೆ 2371 ರೂಪಾಯಿ ನಿಗದಿ ಮಾಡಿದ್ದು ಹೆಚ್ಚುವರ ಹಣವನ್ನ ನೀಡುವಂತೆ ಮನವಿ ಮಾಡಿಕೊಂಡರು.
ಇನ್ನು ಸಕ್ಕರೆ ಕಾರ್ಖಾನೆಯವರು 30 ರೂಪಾಯಿಯಿಂದ ಹೆಚ್ಚಳ ಮಾಡುವುದಾಗಿ ಪ್ರಾರಂಭಿಸಿ ನಂತರ ಅಧಿಕಾರಿಗಳ ಮನವೊಲಿಕೆ ನಂತರ 150 ರೂಪಾಯಿ ಹೆಚ್ಚುವರಿಯಾಗಿ ಕೊಡುವುದಾಗಿ ಘೋಷಣೆ ಮಾಡಿದರು. ರೈತರಿಗೆ 150 ರೂಪಾಯಿ ಹೆಚ್ಚುವರಿ ಹಣವನ್ನ ಟನ್ ಗೆ ಕೊಡಲಿದ್ದು ಪ್ರತಿಭಟನೆಯನ್ನ ಕೈ ಬಿಟ್ಟು ಕಾರ್ಖಾನೆಗೆ ಕಬ್ಬು ಪೂರೈಸುವ ಕಾರ್ಯ ಮಾಡುವಂತೆ ಮನವಿ ಮಾಡಿಕೊಂಡರು. ಬುಧವಾರ ಹಳಿಯಾಳದಲ್ಲಿ ರೈತರ ಜೊತೆ ಈ ಬಗ್ಗೆ ಚರ್ಚೆ ನಡೆಸಿ ರೈತರು 150 ರೂಪಾಯಿ ಹೆಚ್ಚುವರಿ ಹಣಕ್ಕೆ ಒಪ್ಪಿಕೊಂಡರೆ ಪ್ರತಿಭಟನೆ ಕೈ ಬಿಡುವುದಾಗಿ ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಕಬ್ಬು ಬೆಳೆಗಾರರ ಸಂಘಟನೆಯವರು ತಿಳಿಸಿದರು.
ಸರ್ಕಾರದ ವಿರುದ್ಧ ಕಿಡಿಕಾರಿದ ರೈತ ಮುಖಂಡರು
42 ದಿನ ಹೋರಾಟ ಮಾಡಿದ ರೈತರಿಗೆ 150 ರೂಪಾಯಿ ಮಾತ್ರ ಹೆಚ್ಚಳ ನೀಡುವುದು ನಿಜಕ್ಕೂ ದುರಂತಕರ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ್ ಬೊಬಾಟಿ ಹೇಳಿದರು.
ಸಭೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸಕ್ಕರೆ ಆಯುಕ್ತರು ಮೂರನೇ ಬಾರಿಗೆ ಸಭೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಕ್ಕರೆ ಸಚಿವರಿಗೆ ಅಧಿಕಾರಿಗಳಿಗೆ ಭೇಟಿ ಮಾಡಿ ಹೋರಾಟ ನಡೆಸಿದರು ಕೇವಲ 150 ರೂಪಾಯಿ ಹೆಚ್ಚಿಸಿದರೆ ಇದನ್ನು ಒಪ್ಪಿಕೊಳ್ಳುವುದು ಹೇಗೆ? ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ರಾಜ್ಯದಲ್ಲಿ 2800, 2900 ರೂಪಾಯಿ ಟನ್ ಗೆ ಕೊಟ್ಟರೂ ರೈತರು ದಂಗೆ ಎದ್ದಿದ್ದಾರೆ. ಇಡೀ ರಾಜ್ಯದಲ್ಲಿ ಅತಿ ಕಡಿಮೆ ಮೇಲೆ ಹಳಿಯಾಳದಲ್ಲಿ ನೀಡುತ್ತಿದೆ. ರಾಮನ ಹೆಸರಿನಲ್ಲಿ ಬಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾಮೀಜಿ ಉಪವಾಸ ಕೂರುತ್ತಿದ್ದರೂ ಅವರ ಹೋರಾಟವನ್ನ ಅಂತ್ಯಗೊಳಿಸಲು ಬೇಡಿಕೆ ಈಡೇರಿಸಬೇಕು ಎನ್ನುವ ಕಾರ್ಯಕ್ಕೆ ಮಾತ್ರ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೋರ್ವ ಮುಖಂಡ ನಾಗೇಂದ್ರ ಜಿವೋಜಿ ಮಾತನಾಡಿ, ನಾವು 2800 ರೂಪಾಯಿ ಕೊಡುವಂತೆ ಮನವಿ ಮಾಡಿಕೊಂಡರು ಈಗ 150 ರೂಪಾಯಿ ಮಾತ್ರ ಹೆಚ್ಚಳ ಕೊಡುವುದಾಗಿ ಹೇಳಿರುವುದು ಖುಷಿ ನಿಡುವ ಸಂಗತಿಯಲ್ಲ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ರೈತರ ಸಭೆಯಲ್ಲಿ ಈ ವಿಚಾರ ಇಟ್ಟು ರೈತರು ತೆಗೆದುಕೊಂಡ ನಿರ್ಧಾರದಂತೆ ಮುಂದಿನ ರೂಪುರೇಷೆ ಮಾಡಲಾಗುವುದು ಎಂದಿದ್ದಾರೆ.
ಸಭೆಯಲ್ಲಿ ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.