ಹಳಿಯಾಳ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ, ರೈತ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು, ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ನಡೆದ ಸಭೆಯು ಫಲಪ್ರದವಾಗಿದ್ದು, ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರಕ್ಕಿಂತ ರೂ.150 ಹೆಚ್ಚಿನ ದರವನ್ನು ನೀಡಲು ಕಾರ್ಖಾನೆಯವರು ಒಪ್ಪಿಕೊಂಡಿರುವುದು ಸಂತೋಷದ ವಿಷಯ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಕಳೆದ 43 ದಿನಗಳಿಂದ ಪಕ್ಷಾತೀತವಾಗಿ ನಡೆದ ರೈತರ ಶಾಂತಿಯುತ ಹೋರಾಟಕ್ಕೆ ಸಿಕ್ಕಿದ ಪ್ರತಿಫಲ ಇದು. ಸುದೀರ್ಘ ಹೋರಾಟದಲ್ಲಿಯೂ ಕೂಡ ತಮ್ಮ ಸಹನೆ ಕಳೆದುಕೊಳ್ಳದೆ ತಮ್ಮ ಬೇಡಿಕೆ ಮಂಡಿಸಿದ ರೈತರಿಗೆ ಹಾರ್ದಿಕ ಅಭಿನಂದನೆಗಳು. ಈ ವರ್ಷದ ಕಬ್ಬು ನುರಿಯುವ ಹಂಗಾಮು ರೈತರ ಮತ್ತು ಕಾರ್ಖಾನೆಯವರ ಪರಸ್ಪರ ಸಹಕಾರದೊಂದಿಗೆ ಯಾವುದೇ ಸಂಘರ್ಷವಿಲ್ಲದೆ ನಡೆಯಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯವ ನಿಟ್ಟಿನಲ್ಲಿ ನಾನು ನಿರಂತರವಾಗಿ ಮುಖ್ಯಮಂತ್ರಿಗಳೊಂದಿಗೆ, ಸಕ್ಕರೆ ಸಚಿವರೊಂದಿಗೆ ಸಂಪರ್ಕದಲ್ಲಿದ್ದು, ನನ್ನ ಪ್ರಾಮಾಣಿಕ ಪ್ರಯತ್ನಗಳನ್ನು ಸರ್ವರ ಸಹಕಾರದೊಂದಿಗೆ ಮಾಡಿದ್ದು ಎಲ್ಲರಿಗೆ ಗೊತ್ತಿದೆ. ಸಮಸ್ಯೆಯನ್ನು ಸೌಹಾರ್ದತಯುವಾಗಿ ಬಗೆಹರಿಸುವಲ್ಲಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.