ಹೊನ್ನಾವರ: ತಾಲೂಕಿನ ಮಾವಿನಕುರ್ವಾದ ಆಮ್ರಪುರಾಧೀಶ ಗೋಪಾಲಕೃಷ್ಣ ದೇವರ ವನಭೋಜನ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಸೋಮವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನವಾಯಿತು.
ಮಾವಿನಕುರ್ವಾದ ಬಯಲು ಪ್ರದೇಶದಲ್ಲಿ ನೆಲೆ ನಿಂತಿರುವ ಗೋಪಾಲಕನ ಮಹಿಮೆ ಅಪಾರವಾದದು. ಅಂತೇಯೇ ಇಲ್ಲಿ ವೈಕುಂಠ ಚತುರ್ದಶಿ ಸಂದರ್ಭಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವನಭೋಜನ ಕಾರ್ಯಕ್ರಮ ಇಲ್ಲಿನ ವೀಶೇಷತೆಯಲ್ಲೊಂದಾಗಿದೆ. ಎಲ್ಲಾ ಸಮಾಜದವರು ಸೇರಿ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ವನಭೋಜನ ನಡೆಯುವ ದಿನದಂದು ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಬೆಳಿಗ್ಗೆ ಸ್ಥಳೀಯ ಸೇವೆಯೊಂದಿಗೆ ಆರಂಭವಾಗಿ ಶರಾವತಿ ನದಿಯಲ್ಲಿ ದೋಣಿಯ ಮೇಲೆ ಪಲ್ಲಕ್ಕಿಯಲ್ಲಿ ಗೋಪಾಲಕೃಷ್ಣನ ಮೂರ್ತಿಯನ್ನು ಕುಳ್ಳಿರಿಸಿ ಮುಗ್ವಾ-ಸುಬ್ರಹ್ಮಣ್ಯ ಸಮೀಪದ ತನ್ಮಡಗಿ ವನಕ್ಕೆ ತಂದು ವರ್ಷಂಪ್ರತಿ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ದೇವರ ವಿಗ್ರಹವನ್ನಿಡುತ್ತಾರೆ.
ಗೋಪಾಲಕೃಷ್ಣ ದೇವರ ಮೂರ್ತಿಗೆ ಆಭರಣದಿಂದ ಅಲಂಕಾರಗೊಳಿಸುತ್ತಾರೆ. ಧಾತ್ರಿ ಹವನ, ಮಹಾನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿಶೇಷಪೂಜೆ ನಡೆಯುತ್ತವೆ. ಜೊತೆಗೆ ಮಹಾಲಕ್ಷ್ಮೀ, ಹಾಗೂ ದತ್ತಾತ್ರೆಯ ದೇವರಿಗೂ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮಸ್ಥರೆಲ್ಲರು ಸೇರಿ ವನಭೋಜನಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ತಂದು ಕಾಡಿನಲ್ಲಿಯೇ ಭೋಜನ ತಯಾರಿಸುತ್ತಾರೆ.ಈ ಸ್ಥಳದಲ್ಲೆ ನಿರಂತರವಾಗಿ ಹರಿಯುತ್ತಿರುವ ನೀರಿನ ಜರಿಯು ಮತ್ತೊಂದು ವಿಶೇಷತೆಯಾಗಿದೆ. ಈ ನೀರನ್ನಮಾತ್ರ ತಯಾರಿಸಲು ಬಳಸಲಾಗುತ್ತದೆ. ಹೊನ್ನಾವರದ ರಾಮತೀರ್ಥದಿಂದ ಈ ಸ್ಥಳಕ್ಕೆ ನೀರು ಭೂಮಿಯಾಳದಿಂದ ಹರಿದು ಬರುತ್ತದೆ ಎನ್ನುವ ಪ್ರತೀತಿಯು ಇದೆ.