ಶಿರಸಿ: ಹೆಗ್ಗರಣಿ ಪಂಚಾಯತ ನೌಕರ ಮಾರುತಿ ಗೌಡ ವಾಜಗಾರ ಅವರು ವಾಜಗಾರಿನ ತಮ್ಮ ಮನೆಯಲ್ಲಿ ಕಳೆದ 14 ವರ್ಷಗಳಿಂದ ತಾಳ ಮದ್ದಲೆ ಕಾರ್ಯಕ್ರಮವನ್ನು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಆರಾಧನಾ ಭಾವದಿಂದ ನಡೆಸಿಕೊಂಡು ಬಂದಿರುವುದು ಅವರ ಯಕ್ಷಗಾನ ಕಲಾ ಪ್ರೇಮಕ್ಕೆ ಸಾಕ್ಷಿಯಾಗಿದೆ.
ಅತ್ಯಂತ ಶ್ರದ್ಧೆಯಿಂದ ಕೌಟುಂಬಿಕರನ್ನು ಬಂಧು ಬಾಂಧವರನ್ನು ಸೇರಿಸಿ ಮನೆಯಲ್ಲಿಯೇ ಕಾರ್ಯಕ್ರಮ ನಡೆಸಿ ಪ್ರತಿ ವರ್ಷ ಒಬ್ಬ ಸಮರ್ಥ ಕಲಾವಿದರನ್ನು ಗುರುತಿಸಿ ವಿಶೇಷವಾಗಿ ಸನ್ಮಾನಿಸುತ್ತಾ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ನ.5ರಂದು ರಾತ್ರಿ 9ರಿಂದ 1 ಗಂಟೆಯವರೆಗೆ ಜಾಂಬವತೀ ಪರಿಣಯ ತಾಳಮದ್ದಲೆ ಹಾಗೂ ಸನ್ಮಾನ ಕಾರ್ಯಕ್ರಮ ಸಂಪನ್ನಗೊಂಡಿತು.
ಶ್ರೇಷ್ಠ ಅರ್ಥಧಾರಿ ಎಂದು ಗುರುತಿಸಲ್ಪಟ್ಟಿರುವ ನಿವೃತ್ತ ಪ್ರಾಚಾರ್ಯ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ.ಡಾ.ಜಿ.ಎ.ಹೆಗಡೆ ಸೋಂದಾ ಅವರನ್ನು ಮಾರುತಿ ಗೌಡ ಕುಟುಂಬದವರು ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರಿಸಿದ ಡಾ| ಜಿ.ಎ. ಹೆಗಡೆ ಸೋಂದಾ ಮಾರುತಿ ಗೌಡ ಅವರ ಯಕ್ಷಗಾನ ಕಲಾಪ್ರೇಮವನ್ನು ಅಕ್ಷರಗಳಲ್ಲಿ ವರ್ಣಿಸಲಾಗದು. ಇಂಥಹ ಕಲಾ ಪ್ರೇಮಿಗಳಿಂದಲೇ ಕಲೆಯು ಉಳಿದು ಅದರ ಹರಿವು ನಿರಂತರವಾಗಿದೆ. ಯಕ್ಷಗಾನವು ಸರ್ವಾಂಗ ಸುಂದರ ಕಲೆ, ಹಾಗಾಗಿ ಅದು ಸದಾ, ಸರ್ವದಾ, ನಿರಂತರವಾಗಿ ಬಾಳನ್ನು ಬೆಳಗುತ್ತ ಬೆಳೆಯುತ್ತ ಮುನ್ನಡೆಯುವ ಪವಿತ್ರ ಕಲೆ ಯಕ್ಷಗಾನವಾಗಿದೆ, ಯಕ್ಷಸಿಂಧುವಿನಲ್ಲಿ ತಾನೊಂದು ಬಿಂದು ಎಂದರು. ಇದೇ ಸಂದರ್ಭದಲ್ಲಿ ಯುವ ಕಲಾವಿದೆ ಅರ್ಥಧಾರಿ ಮೈತ್ರಿ ಗೌಡ ಸಂಪೇಸರ ಅವರಿಗೆ ಪ್ರೋತ್ಸಾಹಕ ಗೌರವ ನೀಡಿದರು.
ನಂತರ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಕೂಟದಿಂದ ರಘುಪತಿ ನಾಯ್ಕ ಹೆಗ್ಗರಣಿ ಮತ್ತು ಜಿ.ಎಂ. ಭಟ್, ಕೆ.ವಿ. ನಿರ್ದೇಶನದಲ್ಲಿ ಜಾಂಬವತಿ ಪರಿಣಯ ತಾಳಮದ್ದಲೆ ನಡೆಯಿತು. ಎಂ.ಪಿ. ಹೆಗಡೆ ಉಲ್ಲಾಳಗದ್ದೆ ಭಾಗವತರಾಗಿ, ಗಜಾನನ ಹೆಗಡೆ ಕಂಚಿಕೈ ಮದ್ದಲೆಯಲ್ಲಿ ಹಿಮ್ಮೇಳದ ಸಂಭ್ರಮ ನೀಡಿದರು. ಕೃಷ್ಣನಾಗಿ ಡಾ.ಜಿ.ಎ.ಹೆಗಡೆ ಸೋಂದಾ, ಜಾಂಬವನಾಗಿ ಜಿ.ಎಂ.ಭಟ್ಟ ವಾಜಗಾರ, ಉತ್ತಮ ಸಂಭಾಷಣೆ ನೀಡಿ ಕಾರ್ಯಕ್ರಮಕ್ಕೆ ಮೆರಗು ತಂದರು. ಬಲರಾಮನಾಗಿ ಎಂ.ಟಿ.ಗೌಡ, ಅರೆಹಳ್ಳ ನಾರದ ಮತ್ತು ಜಾಂಬವತಿಯಾಗಿ ಮೈತ್ರಿ ಗೌಡ ಅರ್ಥ ಹೇಳಿ ಮಾತಿನ ಮಂಟಪಕಟ್ಟಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಧರ ಗೌಡ ವಾಜಗಾರ ಇದೊಂದು ಉತ್ತಮ ತಾಳಮದ್ದಲೆ ಕಾರ್ಯಕ್ರಮ, ಕಲಾವಿದರ ಕಲಾನೈಪುಣ್ಯತೆಯು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು ಎಂದರು. ಮಾರುತಿ ಗೌಡ ಕುಟುಂಬದವರು ಕಲಾವಿದರಿಗೆ ಆತಿಥ್ಯ ಹಾಗೂ ಸಂಭಾವನೆ ನೀಡಿ ಗೌರವಿಸಿದರು.