ದಾಂಡೇಲಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸರ್ಕಾರಿ ಶಾಲೆಗೆ ಪ್ರವೇಶ ಪಡೆದ ಸುದಿನವಾಗಿದ್ದು, ಈ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ಧ್ವನಿ ಸಂಘಟನೆಯ ವತಿಯಿಂದ ಗಾಂಧಿ ನಗರದ ಸರಕಾರಿ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ, ಅವರ ಆತ್ಮವಿದ್ಯಾರ್ಥಿಗಳು ಅವರ ಚಿಂತನ ಮಂಥನವನ್ನು ಪ್ರತಿಯೊಂದು ಮಗು ಅಳವಡಿಸಿಕೊಳ್ಳಬೇಕು. ಇಂದಿನ ಮಕ್ಕಳು ಭವಿಷ್ಯದ ಭವ್ಯ ಪ್ರಜೆಗಳಾಗಬೇಕೆಂಬ ಉದ್ದೇಶದಿಂದ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ಧ್ವನಿಯ ಸಂಘಟನೆಯ ಅಧ್ಯಕ್ಷ ರವಿಕುಮಾರ್ ಮಾಳಕರಿಯವರು ಹೇಳಿದರು.
ಮುಖ್ಯ ಅತಿಥಿಯಾಗಿ ಎಸ್.ಬಿ.ಐ ಬ್ಯಾಂಕಿನ ಎಸ್‌ಸಿ/ ಎಸ್‌ಟಿ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ಭೀಮಪ್ಪ ಈ.ರಾಥೋಡ್ ಮತ್ತು ನಗರಸಭೆಯ ಸದಸ್ಯೆ ರುಕ್ಮಿಣಿ ಬಾಗಾಡೆಯವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳಾದ ನೋಟ್ ಬುಕ್ ಹಾಗೂ ಶಿಕ್ಷಣ ಪರಿಕರಗಳನ್ನು ವಿತರಿಸಲಾಯಿತು. ಎಎಸ್‌ಐ ಗಿರೀಶ್ ಸೂರ್ಯವಂಶಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಶಿಕ್ಷಕರಾದ ಕೃಷ್ಣ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ಧ್ವನಿ ಸಂಘದ ಸದಸ್ಯರು, ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.