ಶಿರಸಿ: ನಗರದ ಪ್ರತಿಷ್ಠಿತ ನೂಪುರ ನೃತ್ಯ ಶಾಲೆಯ ವಿದ್ಯಾರ್ಥಿ ನಿಖಿಲ್ ಹೆಗಡೆ ರಂಗಪ್ರವೇಶ ಕಾರ್ಯಕ್ರಮನ್ನು ನ.19, ಶನಿವಾರ ಇಳಿಸಂಜೆ 5.30 ರಿಂದ ತಾಲೂಕಿನ ಗೋಳಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ತಾಲೂಕಿನ ಬಪ್ಪನಳ್ಳಿಯ ಸುರೇಶ ಹೆಗಡೆ ಮತ್ತು ಪಾರ್ವತಿ ಹೆಗಡೆ ದಂಪತಿಗಳ ಪುತ್ರನಾದ ನಿಖಿಲ್ ಬಾಲ್ಯದಿಂದಲೇ ನೃತ್ಯ,ಯಕ್ಷಗಾನ, ಲಲಿತಕಲೆಗಳಲ್ಲಿ ಆಸಕ್ತಿ ಹೊಂದಿದ್ದು ನಂತರದಲ್ಲಿ ಅನುರಾಧಾ ಹೆಗಡೆ ಬಳಿ ನೃತ್ಯ ಅಭ್ಯಾಸ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಾಧನೆ ಮಾಡಿ ಜನಮನ್ನಣೆ ಗಳಿಸಿದ್ದಾನೆ. ಭರತನಾಟ್ಯವಷ್ಟೇ ಅಲ್ಲದೇ ಹಿಂದೂಸ್ತಾನಿ ಸಂಗೀತವನ್ನು ವಿದ್ವಾನ್ ಶ್ರೀಧರ್ ಹೆಗಡೆ, ಕರ್ನಾಟಕ ಸಂಗೀತವನ್ನು ಡಾ. ಚಿನ್ಮಯ್ ರಾವ್ ಬೆಂಗಳೂರು ಇವರು ಬಳಿ ಅಭ್ಯಾಸ ಮಾಡುತ್ತಿರುವುದು ವಿಶೇಷವಾಗಿದೆ.
ಬಹುಮುಖ ಪ್ರತಿಭೆಯ ನಿಖಿಲ್ ಭರತನಾಟ್ಯ ರಂಗಪ್ರವೇಶಕ್ಕೆ ಸಜ್ಜಾಗಿ ನಿಂತಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಆಗಮಿಸಲಿದ್ದಾರೆ. ಸಾಗರದ ನಾಟ್ಯತರಂಗದ ವಿ.ಜಿ.ಬಿ. ಜನಾರ್ಧನ್, ಚೈತನ್ಯ ಸಂಗೀತ ವಿದ್ಯಾಲಯದ ವಿ. ಶ್ರೀಧರ್ ಹೆಗಡೆ ಗೌರವ ಉಪಸ್ಥಿತಿ ನೀಡಲಿದ್ದಾರೆ. ಗುರುವಂದನೆಯಲ್ಲಿ ವಿ.ಶ್ರೀಮತಿ ಅನುರಾಧ ಹೆಗಡೆ ಹಾಗೂ ರಾಮಚಂದ್ರ ಹೆಗಡೆ ಇವರಿಗೆ ಗೌರವ ಸಮರ್ಪಿಸಲಿದ್ದು ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಿ ಶುಭ ಹಾರೈಸಲು ಪ್ರಕಟಣೆಯಲ್ಲಿ ಕೋರಲಾಗಿದೆ.