ಕಾರವಾರ: ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ದರ್ಶನದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ದರ್ಶನ ಹೊರತುಪಡಿಸಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ- ಪುನಸ್ಕಾರ, ಅನ್ನಸಂತರ್ಪಣೆ ವ್ಯವಸ್ಥೆಯನ್ನ ಸ್ಥಗಿತಗೊಳಿಸಲಾಗಿದೆ.
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ 6ರಿಂದ 9 ಗಂಟೆಯವರೆಗೆ, ಮಧ್ಯಾಹ್ನ 2.30ರಿಂದ ಸಂಜೆ 6.30ರವರೆಗೆ, ಅಂದರೆ ಗ್ರಹಣ ಕಾಲದಲ್ಲೂ ಭಕ್ತರಿಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ನೀಡುವ ಪ್ರಸಾದ ಭೋಜನ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ.
ಭಟ್ಕಳದ ಮುರುಡೇಶ್ವರ ದೇವಸ್ಥಾನದಲ್ಲಿ ಯಾವುದೇ ಪೂಜೆ- ಪುನಸ್ಕಾರ, ಅನ್ನಪ್ರಸಾದವಿಲ್ಲ. ಆದರೆ ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಮಧ್ಯಾಹ್ನ 3ರಿಂದ ರಾತ್ರಿ 8.30ರವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗ್ರಹಣ ಬಿಟ್ಟ ನಂತರ ಮಹಾಪೂಜೆ, ತೀರ್ಥ, ಪ್ರಸಾದ ವಿತರಣೆ ಮಾಡಲಾಗುತ್ತದೆ.
ಹೊನ್ನಾವರದ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಎಂದಿನಂತೆ ಬೆಳಗ್ಗೆ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ 10 ಗಂಟೆಯ ಬಳಿಕ ಬಾಗಿಲು ಹಾಕಲಾಗುತ್ತದೆ. ಸಂಜೆ ಗ್ರಹಣ ಬಿಟ್ಟ ಬಳಿಕ ದೇವಸ್ಥಾನ ತೆರೆಯಲಿದ್ದು, ನಂತರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಗೆ ಮಾರಿಕಾಂಬೆಗೆ ಮಹಾಪೂಜೆ, ನಂತರ ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ, ಬಳಿಕ ಗ್ರಹಣ ಮೋಕ್ಷ ಕಾಣುವವರೆಗೂ ದೇವಳ ಮುಚ್ಚಲಿದೆ. ಗ್ರಹಣ ಮೋಕ್ಷದ ಬಳಿಕ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ರಾತ್ರಿ 9 ಗಂಟೆಗೆ ಮಹಾಪೂಜೆ ನಡೆಯಲಿದೆ.