ಶಿರಸಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಿಬ್ಬಂದಿಗಳ ವೇತನವನ್ನು ನೀಡಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ನ ಅಭಿವೃದ್ಧಿ ವಿಭಾಗದ ಉಪಕಾರ್ಯದರ್ಶಿ ಡಿ.ಎಮ್.ಜಕ್ಕಪ್ಪಗೋಳ್ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ನಲ್ಲಿ ಶನಿವಾರ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಪಡೆದು ಅವರಿಗೆ ಸಂಬಳ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಆಯಾ ಪಂಚಾಯತ್ ನ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ ಎಂದರು.
ನರೇಗಾ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳನ್ನು ಕೈಗೊಂಡು ಮಾನವದಿನಗಳ ಸೃಜನೆ ಹೆಚ್ಚಿಸಬೇಕು ಎಂದರು. ಇನ್ನು ಮನೆ ಪರಿಷ್ಕರಣೆ, ಎಸ್‌ಹೆಚ್‌ಜಿ ಶೆಡ್, ಆಧಾರ್ ನೋಂದಣಿ, ನರ್ಸರಿ, ಪೌಷ್ಟಿಕ ಕೈತೋಟ, ಅಮೃತ ಗ್ರಾಮ, ಹೆಸ್ಕಾಂ ಬಿಲ್ ವಿಷಯಗಳ ಕುರಿತು ಚರ್ಚಿಸಿದರು.
ಇದಕ್ಕೂ ಮುಂಚೆ ಅಂಡಗಿ ಹಾಗೂ ಬದನಗೋಡ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಸಿಬ್ಬಂದಿ ವೇತನ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೇವರಾಜ್ ಹಿತ್ತಲಕೊಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.