ಸಿದ್ದಾಪುರ;ಸ್ಥಳೀಯ ಅಡಕೆ ವರ್ತಕರ ಸಂಘವು ರೈತಸ್ನೇಹಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತ ಸಾಮಾಜಿಕ ಹಿತವನ್ನು ಕಾಯುತ್ತಿದೆ. ಊರಿಗೆ ಅಗತ್ಯವಾದ ಸೂಕ್ತ ಸಭಾಭವನದ ನಿರ್ಮಾಣಕ್ಕೆ ಮುಂದಾಗಿರುವದು ಶಾಘ್ಲನೀಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ಎ.ಪಿ.ಎಂ.ಸಿ.ಆವರಣದಲ್ಲಿ ಅಡಕೆ ವರ್ತಕರ ಸಂಘವು ನೂತನವಾಗಿ ನಿರ್ಮಿಸಲಿರುವ ಸಭಾಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಅಡಕೆ ಬೆಳೆಗಾರರು ಹೆಚ್ಚುತ್ತಿದ್ದಾರೆ. ಉಳಿದೆಡೆಯ ಬೆಳೆಗಾರರಿಗಿಂತ ನಮ್ಮ ಮಲೆನಾಡಿನ ಬೆಳೆಗಾರರಿಗೆ ಪ್ರಾಕೃತಿಕ ಸಮಸ್ಯೆಗಳು ಹೆಚ್ಚು ಕಳೆದ 4-5 ವರ್ಷದಿಂದ ಕೇಂದ್ರ, ರಾಜ್ಯ ಸರಕಾರಗಳು ಅಡಕೆ ಬೆಲೆಯಲ್ಲಿ ಸ್ಥಿರತೆ ಕಾಯಗದುಕೊಳ್ಳುವಲ್ಲಿ ಕ್ರಮ ವಹಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬೆಳೆಗಾರರ ಕಷ್ಟಕ್ಕೆ ವರ್ತಕರು, ಸಹಕಾರಿ ಸಂಘಗಳು ಸ್ಪಂದಿಸುತ್ತಿವೆ. ರಾಜ್ಯದಲ್ಲೇ ಮೊದಲ ಬಾರಿಗೆ ಎ.ಪಿ.ಎಂ.ಸಿಯಲ್ಲಿ ಎರಡನೇ ಬಾರಿಗೆ ಸಂಘವೊಂದಕ್ಕೆ ನಿವೇಶನವನ್ನು ಇಲ್ಲಿ ಕಾನೂನುರೀತ್ಯಾ ಒದಗಿಸಿಕೊಟ್ಟಿದ್ದೇವೆ. 90 ಲಕ್ಷ ರೂ.ಯೋಜನೆಯ ಈ ಸಭಾಭವನ ಊರಿನ ಅನುಕೂಲ ಒದಗಿಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾದ ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಟಿ.ಎಸ್.ಎಸ್. ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿದರು. ತೋಟಗಾರಿಕೆ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಶ್ರೀಪಾದ ದೀಕ್ಷಿತ, ತಹಸೀಲದಾರ ಸಂತೋಷ ಭಂಡಾರಿ ಉಪಸ್ಥಿತರಿದ್ದರು.
ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುಧೀರ ಬೆಂಗ್ರೆ ನಿರೂಪಿಸಿದರು.
ಕಾಗೇರಿಯವರ ಕೊರಗು: ತಮ್ಮ ಕನಸಿನ ಸತ್ಯಾಗ್ರಹ ಸ್ಮಾರಕ ಭವನ ನಿರ್ಮಾಣದ ಕುರಿತು ಪ್ರಸ್ತಾವಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಪಟ್ಟಣದಲ್ಲಿ ಸುಸಜ್ಜಿತವಾದ ಸತ್ಯಾಗ್ರಹ ಸಭಾಭವನ ನಿರ್ಮಿಸಬೇಕೆನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ ಹಣವನ್ನೂ ಮಂಜೂರು ಮಾಡಿಸಿದ್ದೆ. ಆದರೆ ಕೆಲವರ ಸ್ವಾರ್ಥದ ಕಾರಣದಿಂದ, ಪಟ್ಟಣ ಪಂಚಾಯತದ ತೊಡಕುಗಳಿಂದ ಸಾಧ್ಯವಾಗಲಿಲ್ಲ. ಊರವರೆಲ್ಲ ಸುಮ್ಮನಿರುವಾಗ ನಾನೂ ಸುಮ್ಮನುಳಿದೆ. ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಕೋಟಿ,ಕೋಟಿ ಹಣ ತಂದವನಿಗೆ ಸಭಾಭವನ ಮಾಡಲು ಸಾಧ್ಯವಿಲ್ಲವೇ? ಕೆಲವರಿಗೆ ಆಗುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಸಹಿಸಲಾಗುತ್ತಿಲ್ಲ. ಅದನ್ನು ಸಹಿಸಿಕೊಳ್ಳಲು ವಿಶಾಲ ಮನೋಭಾವ ಬೇಕು. ಈ ಹಿಂದೆ ಅಭಿವೃದ್ಧಿ ಕಾರ್ಯಗಳಿಗೆ ಎಷ್ಟು ಹಣ ಬಂದಿತ್ತು ಎಂದು ಟೀಕೆ ಮಾಡುವವರು ಹೇಳಲಿ. ಯಾರು ಏನೇ ಹೇಳಲಿ, ಅಭಿವೃದ್ದಿ ಕಾರ್ಯಗಳಿಗೆ ಇನ್ನಷ್ಟು ವೇಗ ಕೊಡುತ್ತೇನೆ ಎಂದರು.