ಹಳಿಯಾಳ: ಸರ್ಕಾರ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಪರಸ್ಪರ ಕೈಜೋಡಿಸಿ ರೈತರ ಹಿತಾಸಕ್ತಿಯನ್ನು ಕಾಪಾಡಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಅತ್ಯಂತ ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು. ಸರ್ಕಾರವೂ ಕೂಡ ಕಾದುನೋಡುವ ನಿಲುವನ್ನು ಬದಲಿಸಿ ಶೀಘ್ರವಾಗಿ ನಿರ್ಧಾರ ಪ್ರಕಟಿಸಿ ಸಿಹಿಸುದ್ದಿ ನೀಡಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಳಿಯಾಳ ತಾಲ್ಲೂಕಿನ ಆಡಳಿತಸೌಧದ ಎದುರು ಕಳೆದ39 ದಿನಗಳಿಂದ ಅಹೋರಾತ್ರಿ ಧರಣಿ ಮೂಲಕ ಪ್ರತಿಭಟನೆ ನಡೆಸುತ್ತಿರುವುದು ನ್ಯಾಯೋಚಿತವಾಗಿದೆ. ನಾನು ಹಾಗೂ ನಮ್ಮ ಕಾಂಗ್ರೆಸ್ ಪಕ್ಷವು ಕೂಡ ರೈತರ ಹೋರಾಟವನ್ನು ಬೆಂಬಲಿಸುತ್ತಾ ಬಂದಿರುತ್ತೇವೆ. ಸಕ್ಕರೆ ಅಭಿವೃದ್ಧಿ ಆಯುಕ್ತರು10ನೇ ನವೆಂಬರ್ 2022 ರಂದು ಸರ್ಕಾರ ತನ್ನ ನಿರ್ಧಾರವನ್ನು ಘೋಷಿಸುವುದಾಗಿ ಕಾಲಾವಕಾಶ ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕಬ್ಬು ಕಟಾವು ವಿಳಂಬವಾಗಿದ್ದು, ಸಕಾಲದಲ್ಲಿ ಕಾರ್ಖಾನೆಗೆ ಸಾಗಿಸದಿದ್ದರೆ ಕಬ್ಬು ಒಣಗಿ ತೂಕ ಕಡಿಮೆಯಾಗುವುದರೊಂದಿಗೆ ರೈತರಿಗೆ ನಷ್ಟವಾಗುವ ಸಂಭವವಿದೆ. ಇದರ ಪರಿಣಾಮ ಎಲ್ಲ ರೈತರ ಮೇಲೂ ಆಗಲಿದೆ. ಜೊತೆಗೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಕೂಡ ರೈತಪರ ನಿಲುವನ್ನು ವಹಿಸಿ ಮೃಧು ಧೋರಣೆ ತಾಳುವ ಮೂಲಕ ರೈತರ ಪಾಲಿಗೆ ಕಾಮಧೇನು ಆಗಬೇಕಿದೆ. ಅಲ್ಲದೇ, ನಾನು ಕೂಡ ಸಕ್ಕರೆ ಸಚಿವ ಶಂಕರಗೌಡ ಮುನೇನಕೊಪ್ಪ ಅವರ ಜೊತೆ ಸಂಪರ್ಕ ಸಾಧಿಸಿ ಮಾತನಾಡಿ, ರೈತರ ಹಿತದೃಷ್ಟಿಯಿಂದ ತಕ್ಷಣ ಈ ಸಮಸ್ಯೆ ಬಗೆಹರಿಸಿ ಕೂಡಲೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕೆAದು ಒತ್ತಾಯಿಸಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.