ಕುಮಟಾ: ಪಟ್ಟಣದ ಬಗ್ಗೋಣ ಶಾಲೆ ಸಮೀಪದ ರಸ್ತೆ ಪಕ್ಕದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಉತ್ತರಪ್ರದೇಶ ಮೂಲದ ಇಬ್ಬರು ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಟ್ಟಣದ ಬಗ್ಗೋಣ ಶಾಲೆ ಸಮೀಪದ ರಸ್ತೆ ಪಕ್ಕದಲ್ಲಿ ಉತ್ತರಪ್ರದೇಶದ ಇಬ್ಬರು ಯುವಕರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ. ತಕ್ಷಣ ಯುವಕರನ್ನು ವಿಚಾರಿಸಲು ಸ್ಥಳೀಯರು ಮುಂದಾಗುತ್ತಿದ್ದಂತೆ ಈ ಇಬ್ಬರು ಯುವಕರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಹಿಂಬಾಲಿಸಿದ ಸ್ಥಳೀಯರು ಈ ಯುವಕರು ಉತ್ತರಪ್ರದೇಶದವರು ಎಂದು ತಿಳಿದ ತಕ್ಷಣ ಏನೋ ಅಪರಾಧ ಕೃತ್ಯ ವೆಸಗಲೇ ಇಲ್ಲಿಗೆ ಬಂದಿರಬೇಕೆಂದು ತಪ್ಪಾಗಿ ಅರ್ಥೈಸಿಕೊಂಡು ಇಬ್ಬರು ಯುವಕರಿಗೆ ಗೂಸಾ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ವಶಕ್ಕೆ ಪಡೆದು, ಅವರ ಬಳಿಯಿದ್ದ ಮೊಬೈಲ್‌ನ್ನು ಪರಿಶೀಲಿಸಿದಾಗ, ಇಲ್ಲಿನ ಯುವತಿಯರೊಡನೆ ಈ ಯುವಕರಿಗೆ ಪ್ರೇಮಾಂಕುರವಾಗಿರುವುದು ತಿಳಿದುಬಂದಿದೆ. ಯುವತಿಯರ ಜೊತೆಗಿರುವ ಪೋಟೊ ಕೂಡ ಅವರ ಮೊಬೈಲ್‌ನಲ್ಲಿದೆ. ಈ ಯುವತಿಯರೇ ಆ ಯುವಕರನ್ನು ಇಲ್ಲಿಗೆ ಕರೆಯಿಸಿದ್ದರಂತೆ. ರೈಲ್ವೆ ಮೂಲಕ ಕುಮಟಾಕ್ಕೆ ಬಂದ ಯುವಕರು ಯುವತಿಯರನ್ನು ಭೇಟಿ ಮಾಡಿ, ಹಲವು ಪೋಟೊಗಳನ್ನು ತೆಗೆದುಕೊಂಡಿರುವುದು ತಿಳಿದುಬಂದಿದೆ. ಹಾಗಾಗಿ ಯುವತಿಯರ ಪಾಲಕರನ್ನು ಪೊಲೀಸ್ ಠಾಣೆಗೆ ಕರೆಯಿಸಿದ ಅಧಿಕಾರಿಗಳು, ವಿಚಾರಣೆ ಕೈಗೊಂಡಿರುವುದು ತಿಳಿದುಬಂದಿದೆ.