ಕಾರವಾರ: ನಗರದ ಹಿಂದೂ ಪ್ರೌಢಶಾಲೆಯ 125ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ‘ಕರಿಯರ್ಸ್ & ಯು’ ವಿಚಾರಗೋಷ್ಠಿಯಲ್ಲಿ ಮುಂಬೈನ ಪೆಟ್ರೋಲಿಯಂ ಕ್ಯಾರಿಂಗ್ ಆಫ್ ಶಿಪ್ಸ್ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿಯ ಮುಖ್ಯ ಎಂಜಿನಿಯರ್ ರಾಜೇಶ ಎ.ಬಾಂದೇಕರ ಪಾಲ್ಗೊಂಡರು.
ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರತಿನಿತ್ಯ ಕನಿಷ್ಠ ಪಕ್ಷ 30 ನಿಮಿಷವಾದರೂ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಬೇಕು. ದಿನಪತ್ರಿಕೆಗಳ ಜೊತೆಗೆ ವಾರಪತ್ರಿಕೆ, ಮ್ಯಾಗಜೀನ್ ಮುಂತಾದ ಸಾಹಿತ್ಯದ ಕುರಿತಾದ ವಿಷಯಗಳನ್ನು ಓದುವುದರಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ನುಡಿದರು. ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದ ವಿವಿಧ ಫೋಟೋ ಹಾಗೂ ವಿಡಿಯೋ ಕ್ಲಿಪಿಂಗ್‌ಗಳನ್ನು ತೋರಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ ಸ್ವಾಗತ ಕೋರಿದರು. ಕಾರವಾರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಿರುದ್ದ ಹಳದಿಪುರಕರ ಮಾತನಾಡಿದರು. ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ವಂದನಾರ್ಪಣೆ ಸಲ್ಲಿಸಿದರು ಹಾಗೂ ಸುಮತಿ ದಾಮ್ಲೆ ಪ್ರೌಢಶಾಲೆಯ ಪ್ರಭಾರ ಮುಖ್ಯಾಧ್ಯಾಪಕ ಸಂತೋಷ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ವಿದ್ಯಾರ್ಥಿನಿ ಸಂಗೀತಾ ಬಾಂದೇಕರ ಹಾಗೂ ಮೂರೂ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದರು.