ಅಂಕೋಲಾ: ಕಾಲೇಜಿಗೆ ಮೂಲಭೂತ ಸೌಲಭ್ಯ ಸಿಗಬೇಕಾದರೆ ಇಲ್ಲಿಯ ಎಲ್ಲ ತರಹದ ಗುಣಮಟ್ಟಗಳು ಗುರುತಿಸಲ್ಪಡುತ್ತವೆ. ಕಾಲೇಜಿಗೆ ನವೆಂಬರ್‌ನಲ್ಲಿ ನ್ಯಾಕ್ ತಂಡ ಭೇಟಿ ನೀಡಲಿದ್ದು, ಕಾಲೇಜಿನ ವತಿಯಿಂದ ಎಲ್ಲ ತರಹದ ಕೆಲಸ-ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಪಾಲಕರ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದವರ ಕಾರ್ಯಚಟುವಟಿಕೆಗಳು ಕೂಡ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಪ್ರಾಚಾರ್ಯ ಡಾ.ಎನ್.ಎಂ.ಖಾನ್ ಹೇಳಿದರು.
ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ವಿದ್ಯಾರ್ಥಿ-ಪಾಲಕರ ಸಂಘ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಲಕರ ಸಮಿತಿಯ ಮಂಜುನಾಥ ಎಲ್.ನಾಯ್ಕ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಮತ್ತು ಕಾಲೇಜಿನ ಸ್ಥಿತಿಗತಿಗಳನ್ನು ಗಮನಿಸುವುದಕ್ಕಾದರೂ ಸಭೆಗಳಿಗೆ ಹೆಚ್ಚಿನ ಪಾಲಕರು ಬರುವಂತಾಗಬೇಕು. ಕೇವಲ ಕಾಲೇಜಿಗೆ ಮಕ್ಕಳನ್ನು ಕಳಿಸುವುದು ಮುಖ್ಯವಲ್ಲ. ಅವರು ಯಾವ ರೀತಿ ಅಧ್ಯಯನ ಮಾಡುತ್ತಾರೆ ಮತ್ತು ಕಾಲೇಜಿನ ಸ್ಥಿತಿಗತಿಗಳನ್ನು ತಿಳಿಯಬೇಕು ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿ, ಸಂಘ ರಚನೆಯಾದ ನಂತರ ಕಾಲೇಜಿನ ದಶಮಾನೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಇಂತಹ ಸಭೆಗಳಿಗೆ ಬರುವಂತಾಗಬೇಕು. ಕಲಿತು ನಂತರ ಕಾಲೇಜಿನ್ನು ಯಾರು ಮರೆಯಬಾರದು ಎಂದರು.
ಐಕೆಎಸ್‌ಸಿ ಮೇಲ್ವಿಚಾರಕಿ ಶಾರದಾ ಭಟ್ ನ್ಯಾಕ್ ತಂಡದ ಉದ್ದೇಶದ ಕುರಿತು ಮಾತನಾಡಿ, ನಮ್ಮ ಕಾಲೇಜಿಗೆ ನ್ಯಾಕ್ ತಂಡದವರು ನೀಡುವ ಶ್ರೇಣಿಗೆ ಅನುಗುಣವಾಗಿ ಅನುದಾನ ಬರುತ್ತದೆ. ಎಲ್ಲರೂ ಒಟ್ಟಾಗಿ ಕಾಲೇಜಿನಲ್ಲಿ ಕೆಲಸ-ಕಾರ್ಯಗಳು ಮಾಡಿದರೆ ಉತ್ತಮ ಶ್ರೇಣಿ ದೊರೆಯುತ್ತದೆ. ಇದರಿಂದ ಕಾಲೇಜಿನ ವಿದ್ಯಾರ್ಥಿಗಳ ಮುಂದಿನ ಕಾರ್ಯಚಟುವಟಿಕೆಗೆ ಪ್ರೋತ್ಸಾಹಕರವಾಗಿರುತ್ತದೆ ಎಂದರು.
ಪಾಲಕರಾದ ವಾಸುದೇವ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿ ಸಂಘದ ಸಂಚಾಲಕಿ ಜ್ಯೋತಿ ನಾಯಕ ಸ್ವಾಗತಿಸಿದರು. ಪ್ರಾಧ್ಯಾಪಕಿಯರಾದ ರಾಜೇಶ್ವರಿ ಟಿ.ಎಂ.ನಿರ್ವಹಿಸಿದರು. ಮಧುರಶ್ರೀ ವಂದಿಸಿದರು. ಡಾ.ಎಂ.ವೀಣಾ, ಶಬಾನಾ ಶೇಖ್, ದ.ರ.ಹಲ್ಯಾಳ, ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಸಿಮಿತಾ ನಾಯ್ಕ ಉಪಸ್ಥಿತರಿದ್ದರು.