ಶಿರಸಿ: ಅರಣ್ಯ ಹಕ್ಕು ಕಾಯಿದೆ ಜಾರಿ ಇರುವ ಸಂದರ್ಭದಲ್ಲಿ ಸರಕಾರದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ, ಅರಣ್ಯ ಪ್ರದೇಶದಿಂದ ಅರಣ್ಯವಾಸಿಗಳನ್ನ ಕಾನೂನು ಕ್ರಮ ಜರುಗಿಸಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಹಿರಿಯ ಅರಣ್ಯ ಅಧಿಕಾರಿಗಳು ಪದೇ ಪದೇ ನಿರ್ದೇಶನ ನೀಡುವ ಕ್ರಮಕ್ಕೆ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯು ತೀವ್ರವಾಗಿ ಖಂಡಿಸಿದೆ.
ಅರಣ್ಯ ಪ್ರದೇಶಗಳ ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸುವ ಸಂಬಂಧ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆಗೆ ಅಂತಿಮ ಆದೇಶ ನೀಡುವುದಲ್ಲದೇ, ಒಕ್ಕಲೆಬ್ಬಿಸಲು ಕೈಗೊಂಡಿರುವ ಕ್ರಮದ ಕುರಿತು ನಿರ್ದಿಷ್ಟ ಕಾಲಾವಧಿಯಲ್ಲಿ ವರದಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು)ಯಾದ ಆರ್ ಕೆ ಸಿಂಗ್ ಅಕ್ಟೋಬರ್ 13 ರಂದು ಬರೆದಿರುವ ಪತ್ರವನ್ನ ಪತ್ರಿಕೆಗೆ ಬಿಡುಗಡೆ ಮಾಡುತ್ತಾ, ಒಕ್ಕಲೆಬ್ಬಿಸಿ ವರದಿ ನೀಡಲು ನೀಡಿದ ಆದೇಶವನ್ನ ಶೀಘ್ರದಲ್ಲಿ ಸರಕಾರ ಹಿಂಪಡೆಯಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.
ಅರಣ್ಯ ಪ್ರದೇಶಗಳ ಒತ್ತುವರಿ ಪ್ರಕರಣಗಳ ವಿಚಾರಣೆ ತುರ್ತಾಗಿ ಜರುಗಿಸುವಂತೆ ಕಳೆದ ನಾಲ್ಕೈದು ಸಭೆಗಳಲ್ಲಿ ಸರಕಾರ ನಿರ್ಧಾರ ತೆಗೆದುಕೊಂಡಿದ್ದಾಗಲೂ, ಒಕ್ಕಲೆಬ್ಬಿಸುವ ಪ್ರಾಧಿಕಾರ ಕಾಲಕಾಲಕ್ಕೆ ವರದಿ ನೀಡದೇ ಇರುವುದರಿಂದ ಕೇಂದ್ರ ಕಛೇರಿಯಲ್ಲಿ ಸ್ಪಷ್ಟ ಚಿತ್ರಣ ಹೊಂದಲು ಸಾಧ್ಯವಾಗುತ್ತಿಲ್ಲ ಎಂಬ ಅಂಶವನ್ನ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯೂ ವೈಯಕ್ತಿಕ ಹೆಸರಿನಲ್ಲಿ ಜಿಲ್ಲಾದ್ಯಂತ ಹಾಗೂ ಜಿಲ್ಲೆಯ ಅಧಿಕಾರಿಗಳಿಗೆ ಮಾತ್ರ ನಿರ್ದೇಶನ ನೀಡಿರುವುದು ಈ ಆದೇಶದ ವಿಶೇಷ ಎಂದು ರವೀಂದ್ರ ನಾಯ್ಕ ಹೇಳಿದರು.
ಒಕ್ಕಲೆಬ್ಬಿಸುವ ವರದಿಗೆ ಕಾಲನಿಗದಿ:
ನಿರಂತರ ಒತ್ತುವರಿ ತೆರವಿನ ವರದಿಗೆ ನಿಗದಿತ ನಮೂನೆಯಲ್ಲಿ ಮೇಲಧಿಕಾರಿಗಳಿಗೆ ಕಾಲಕಾಲಕ್ಕೆ ಸಲ್ಲಿಸಬೇಕಾದ ವರದಿ ಸಲ್ಲಿಸದಿರುವುದರ ಬಗ್ಗೆ ಒತ್ತಡದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಅತೀ ಪ್ರಮುಖ ವಿಷಯವಾಗಿದ್ದರಿಂದ ಸರಕಾರಕ್ಕೆ ಕಾಲಕಾಲಕ್ಕೆ ಒಕ್ಕಲೆಬ್ಬಿಸುವ ಮಾಹಿತಿ ನೀಡಬೇಕು ಎಂಬ ಅಂಶ ಅಡಕವಾಗಿದೆ ಎಂದು ರವೀಂದ್ರ ನಾಯ್ಕ ಹೇಳುತ್ತಾ ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಸಪ್ಟೆಂಬರ್‌ವರೆಗಿನ ಒಕ್ಕಲೆಬ್ಬಿಸಿದ ಪ್ರಗತಿಯ ವಿವರವನ್ನು ನಿಗದಿತ ನಮೂನೆಯಲ್ಲಿ ಅಕ್ಟೋಬರ್ ೩ ನೇ ವಾರದ ಒಳಗೆ ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಮಂತ್ರಿ-ಸಭಾಧ್ಯಕ್ಷರ ಕೇಳಿಕೆಗೆ ಕಿಮ್ಮತ್ತಿಲ್ಲ : ಸರಕಾರದ ಪರವಾಗಿ ಮಂತ್ರಿಗಳು ಹಾಗೂ ಸಭಾಧ್ಯಕ್ಷರು ಒಕ್ಕಲೆಬ್ಬಿಸುವುದಿಲ್ಲ. ಈ ದಿಶೆಯಲ್ಲಿ ಅರಣ್ಯವಾಸಿಗಳು ಆತಂಕಕ್ಕೆ ಒಳಗಾಗಬಾರದು ಹಾಗೂ ಕೆಲವು ವ್ಯಕ್ತಿಗಳು ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವುದಾಗಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿರುವುದಾಗಿ ನೀಡುವ ಹೇಳಿಕೆಗಳು ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ಈ ಆದೇಶಗಳಿಂದ ಮಂತ್ರಿ, ಸಭಾಧ್ಯಕ್ಷರ ಕೇಳಿಕೆಗೆ ಕಿಮ್ಮತ್ತಿಲ್ಲದಂತಾಗಿದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಸರಕಾರದ ಆದೇಶ ಬಿಡುಗಡೆ ಮಾಡುವ ಸಂದರ್ಭದಲ್ಲಿ ಲೋಕೇಶ್ ಆರ್ ಹೆಗಡೆ ಹಾಗೂ ಸುಮಂತ ಎಸ್ ಹೆಗಡೆ ಉಪಸ್ಥಿತರಿದ್ದರು.