ಕಾರವಾರ: ತಾಲೂಕಿನ ವಿವಿಧ ಶಾಲೆ-ವಸತಿ ನಿಲಯಗಳಲ್ಲಿ ವ್ಯಾಸಾಂಗ ವಾಡುತ್ತಿರುವ ಮಕ್ಕಳಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಕಣ್ಣುಬೇನೆ ಸಾಂಕ್ರಾಮಿಕ ಕಾಯಿಲೆಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಆರೋಗ್ಯ, ಶಿಕ್ಷಣ, ಶಿಶು ಅಭಿವೃದ್ಧಿ, ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಾಲೂಕು ಪಂಚಾಯತ್‌ನ ಆಡಳಿತಾಧಿಕಾರಿಗಳಾದ ಸೋಮಶೇಖರ್ ಮೇಸ್ತ ಅವರು ಸೂಚನೆ ನೀಡಿದರು.
ತಾಲೂಕು ಪಂಚಾಯತ್‌ನ ಸಭಾಂಗಣದಲ್ಲಿ ಶನಿವಾರ ಜರುಗಿದ ತಾ.ಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ನಿಂದ ಹಲವು ತೊಂದರೆ ಅನುಭವಿಸಿದ್ದ, ಸಾರ್ವಜನಿಕರು ಹಾಗೂ ಮಕ್ಕಳು ಪ್ರಸ್ತುತ ಕಾಣಿಸಿಕೊಂಡಿರುವ ಕಣ್ಣುಬೇನೆ ಕಾಯಿಲೆಯಿಂದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ತಾಲೂಕಿನಲ್ಲಿ ಈ ಕಾಯಿಲೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವಂತಿದೆ. ಹೀಗಾಗಿ ಶಿಕ್ಷಣ, ಆರೋಗ್ಯ, ಶಿಶು ಅಭಿವೃದ್ಧಿ, ಸಮಾಜ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಣ್ಣುಬೇನೆ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಿದೆ. ಕಣ್ಣುಬೇನೆ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಕಾಣಿಸಿಕೊಂಡ ಮಕ್ಕಳನ್ನು ಶಾಲೆಗೆ ಕಳುಹಿಸದೇ ಮನೆಯಲ್ಲೇ ಪ್ರತ್ಯೇಕವಾಗಿರಿಸಲು ಶಿಕ್ಷಕರಿಗೆ ಮತ್ತು ಪಾಲಕರಿಗೆ ತಿಳಿಸಬೇಕು. ಅಗತ್ಯವಿದ್ದರೆ ಆ ಮಕ್ಕಳನ್ನ ಐಸೊಲೇಷನ್‌ಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಸೂರಜ ನಾಯಕ ಮಾತನಾಡಿ, ತಾಲೂಕಿನ ವಿವಿಧ 24 ಶಾಲೆಗಳ 108 ಮಕ್ಕಳಲ್ಲಿ ಕಣ್ಣುಬೇನೆ ಕಾಣಿಸಿಕೊಂಡಿರುವುದಾಗಿ ನೊಂದಣಿಯಾಗಿದೆ. ಈ ಪೈಕಿ 52 ಮಕ್ಕಳು ಈಗಾಗಲೇ ಚೇತರಿಸಿಕೊಂಡಿದ್ದು, ಉಳಿದ ಎಲ್ಲ ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಅವನ್ನು ಶಾಲೆಗೆ ಕಳುಹಿಸದಂತೆ ಮತ್ತು ಬೇರೆ ಮಕ್ಕಳೊಂದಿಗೆ ಸೇರದಂತೆ ಜಾಗ್ರತಿ ವಹಿಸಲು ತಿಳಿಸಲಾಗಿದೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸರಿಯಾದ ಚಿಕಿತ್ಸೆ ನೀಡಿದರೆ ಕಣ್ಣುಬೇನೆ ಕಾಯಿಲೆಗೆ ಒಳಗಾದವರು ಒಂದು ವಾರದಲ್ಲಿ ಗುಣಮುಖರಾಗಲಿದ್ದಾರೆ ಎಂದರು.
ಶಾಲಾ- ಕಾಲೇಜುಗಳು ಕಳದ ಕೆಲ ದಿನಗಳಿಂದ ಪುನಃ ಆರಂಭವಾಗಿದ್ದು, ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಎಲ್ಲ ವಸತಿ ನಿಲಯಗಳಿಗೆ ಮತ್ತು ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಿಶು ಅಭಿವೃದ್ಧಿ, ರೇಷ್ಮೆ, ಸಾರಿಗೆ, ಲೋಕೋಪಯೋಗಿ, ಬಂದರು, ತೋಟಗಾರಿಕೆ, ಅರಣ್ಯ, ಸಣ್ಣ ನೀರಾವರಿ, ಆಹಾರ, ಪಶುಸಂಗೋಪನೆ, ಆಯುರ್ವೇದ, ಕೃಷಿ, ಅಕ್ಷರ ದಾಸೋಹ, ನಿರ್ಮಿತಿ ಕೇಂದ್ರ, ಪಿಎಂಜಿಎಸ್‌ವೈ, ಹೆಸ್ಕಾಂ ಸೇರಿದಂತೆ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಾಲಪ್ಪನವರ ಆನಂದಕುಮಾರ, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ ನಾಯ್ಕ, ವ್ಯವಸ್ಥಾಪಕರಾದ ಅನಿತಾ ಬಂಡಿಕಟ್ಟಿ, ರಾಮದಾಸ ಗುರವ, ಭಾರತಿ ಕಾಂಬಳೆ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.