ಕಾರವಾರ: ಕೇಂದ್ರದಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ರಾಜ್ಯದಲ್ಲಿ ಯಡಿಯೂರಪ್ಪನವರು ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಮೇಲೆ ಕಳೆದ 70 ವರ್ಷಗಳಲ್ಲಿ ಹಿಂದುಳಿದ ವರ್ಗಗಳಿಗೆ ದೊರಕದ ಅನೇಕ ಸೌಲಭ್ಯಗಳು, ಸವಲತ್ತುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ದೊರಕುತ್ತಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ ಪ್ರತಿ ರಾಜ್ಯದಲ್ಲೂ ಶೇ.56ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಸಣ್ಣ ಸಣ್ಣ ಜಾತಿ ಜನಾಂಗಗಳ ಪ್ರಮಾಣವಿದ್ದರೂ, ಸ್ವಾತಂತ್ರ‍್ಯ ಬಂದಾಗಿನಿಂದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರಗಳು ಸರಿಯಾದ ರೀತಿಯ ಸೌಲಭ್ಯಗಳನ್ನು ಒದಗಿಸರಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಅನೇಕ ಸೌಲಭ್ಯ ಈ ಸಮಾಜಕ್ಕೆ ದೊರತಿದೆ ಎಂದರು.
ಭಾರತ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನವನ್ನು ಕೊಡುವುದರ ಜೊತೆಗೆ ಮೋದಿ ಸಂಪುಟದಲ್ಲಿ ಸುಮಾರು 27 ಜನ ಹಿಂದುಳಿದ ವರ್ಗಗಳ ಸಚಿವರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಸಹ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಎಲ್ಲಾ ಅವಕಾಶಗಳು ಭಾರತೀಯ ಜನತಾ ಪಕ್ಷದ ಒಂದು ಮುಕ್ತ ಮತ್ತು ಮುಂದಾಲೋಚನೆಯ ಸಮಾಜ ಪರಿವರ್ತನಾ ಚಿಂತನೆಯ ಫಲವಾಗಿ ಹಿಂದುಳಿದ ವರ್ಗಗಳು ಇಂದು ಗ್ರಾಮ ಮಟ್ಟದಿಂದ ಪ್ರಮುಖ ನಗರಮಟ್ಟದವರೆಗೂ ಗಟ್ಟಿಯಾಗಿ ಸಮಾಜದಲ್ಲಿ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಮೀಸಲಾತಿಗಳನ್ನು ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದೆ ಎಂದರು.
ಹಿಂದುಳಿದ ವರ್ಗದಲ್ಲಿರುವ ಅತಿ ಸಣ್ಣ ಸಣ್ಣ ಜಾತಿಗಳನ್ನು ಗುರುತಿಸಿ ರಾಜ್ಯ ಸರ್ಕಾರ ನಿಗಮಗಳನ್ನು ರಚಿಸಿ, ಅತಿ ಸಣ್ಣ ಸಣ್ಣ ಜಾತಿಗಳ ಸರ್ವತೋಮುಖ ಅಭಿವೃದ್ಧಿಗೆ ವೇದಿಕೆಯನ್ನು ಸೃಷ್ಟಿಸಿಕೊಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನು ಕುಲಕಸುಬು ಆಧಾರಿತವಾಗಿ ಕಟ್ಟಿಕೊಳ್ಳಲು ಸಹಾಯಕವಾದ ಮಾಧ್ಯಮವಾಗಿದೆ. ಇದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ನೀಡಿರುವ ಪ್ರಮುಖ ಕೊಡುಗೆ ಎಂದರೆ ತಪ್ಪಾಗಲಾರದು ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಅರ್ಥವಾದ ಮೀಸಲಾತಿಯನ್ನು ಒದಗಿಸಿಕೊಡುವಲ್ಲಿ ಕಾನೂನಾತ್ಮಕ ಬೆಂಬಲ ನೀಡುವುದರೊಂದಿಗೆ ಪರಿಣಾಮಕಾರಿಯಾಗಿ ಮಿಸಲಾತಿಯನ್ನು ಜಾರಿಗೊಳಿಸಲು ದೃಢ ಹೆಜ್ಜೆಗಳನ್ನು ನೀಡುತ್ತಿದೆ. ಪ್ರತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಹಿಂದುಳಿದ ವರ್ಗಗಳು ವಿಶಿಷ್ಟವಾದ ಯೋಜನೆಗಳನ್ನು ಪಡೆದುಕೊಳ್ಳುತ್ತಿದೆ ಮತ್ತು ಡಬಲ್ ಇಂಜಿನ್ ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸಿ ಜಾರಿಗೊಳಿಸಲಾಗುತ್ತಿದೆ ಎಂದರು.
ಅಕ್ಟೋಬರ್ 30 ರಂದು ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಹತ್ತಿರ ರದ್ದೇವಾಡಿ ಬಡಾವಣೆಯಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ನಡೆಯುತ್ತಿದ್ದು, ಸುಮಾರು ಆರು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಡಾ. ಕೆ. ಲಕ್ಷ್ಮಣ್‌ರವರು, ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌವ್ಹಾಣ್ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಹಲವರು ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಉಪಸ್ಥಿತರಿದ್ದರು.