ಹೊನ್ನಾವರ: ನಮ್ಮ ಸಂಸ್ಕೃತಿಯ ಅರಿವು ನಮಗಿಲ್ಲ. ಕಾಂತಾರ ಸಿನಿಮಾದ ಮೂಲಕ ನಮ್ಮ ಸಂಸ್ಕೃತಿ ಇಡೀ ಪ್ರಪಂಚ ವ್ಯಾಪಿಸಿದೆ. ಇದು ಕನ್ನಡಿಗರ ಶಕ್ತಿಯಾಗಿ ಎಲ್ಲೆಡೆ ರೋಮಾಂಚನ ಮೂಡಿಸಿದ ಸಂಗತಿಯಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಅಭಿಪ್ರಾಯಪಟ್ಟರು.
ತಾಲೂಕಿನ ಕಾಸರಕೋಡ ಇಕೋ ಬೀಚ್ ಆವಾರದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಮರೆತರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ. ಭಾರತದ 56ಕ್ಕೂ ಅತ್ಯಂತ ಹಿರಿಯ ಭಾಷೆಯಲ್ಲಿ ಕನ್ನಡವೂ ಒಂದು. ಅಂತಹ ಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು. ಕನ್ನಡದ ಹಿರಿಮೆ ಹೆಚ್ಚಿಸಲು ನಾವೆಲ್ಲರೂ ಟೊಂಕ ಕಟ್ಟಿ ನಿಲ್ಲೋಣ ಎಂದು ಕರೆನೀಡಿದರು.
ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಆಯ್ದ ಶಾಲಾ ವಿದ್ಯಾರ್ಥಿಗಳು ನಾಡಗೀತೆ, ಆಯ್ದ ಆರು ಹಾಡುಗಳನ್ನು ಹಾಗೂ ವಿವಿಧ ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಕನ್ನಡ ಭಾಷೆಯ ಬಗ್ಗೆ ಕಾಳಜಿ ಹಾಗೂ ನಾಡುನುಡಿಗೆ ಗೌರವಿಸುತ್ತೇನೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್, ಇಓ ಸುರೇಶ ನಾಯ್ಕ, ಪ.ಪಂ. ಮುಖ್ಯಾಧಿಕಾರಿ ಪ್ರವೀಣಕುಮಾರ್, ಪದವಿಪೂರ್ವ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ನೆಟ್ಟೂರ್, ಸಿಪಿಐ ಶ್ರೀಧರ ಎಸ್.ಆರ್., ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಪ್ರವೀಣಕುಮಾರ, ವಾಲಿಬಾಲ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಬಸವರಾಜ ಓಶಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಏಕಲವ್ಯ ಪ್ರಶಸ್ತಿ ವಿಜೇತ ವಾಲಿಬಾಲ್ ಆಟಗಾರ ನಾಗರಾಜ ಹೆಗಡೆ, ಕೃಷಿ ಅಧಿಕಾರಿ ಪುನೀತಾ ಎಸ್.ಬಿ., ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ, ಯುವಜನ ಸೇವಾಕ್ರೀಡಾಧಿಕಾರಿ ಸುಧೀಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.