ಭಟ್ಕಳ: ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಕೋಟಿ ಕಂಠ ಗಾಯನ ಕಾರ್ಯಕ್ರಮ ತಾಲೂಕಿನ ಹಾಡವಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಜೈನ ಬಸದಿಯಲ್ಲಿ ನೆರವೇರಿತು.
ತಾಲೂಕಾ ಆಡಳಿತ, ಹಾಡವಳ್ಳಿ ಗ್ರಾಮ ಪಂಚಯತಿ ಹಾಗೂ ಮಾರುಕೇರಿ ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ ಕುಂಟವಾಣಿ ಸರಕಾರಿ ಪ್ರೌಢಶಾಲೆ ಹಾಗೂ ಮಾರುಕೇರಿ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಏಕಕಂಠದಲ್ಲಿ ಕನ್ನಡದ 6 ಗೀತೆಗಳ ಗಾಯನ ನಡೆಯಿತು. ಮಕ್ಕಳು ಕನ್ನಡ ಧ್ವಜದೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿದ್ದರು.
ಕಾರ್ಯಕ್ರಮದಲ್ಲಿ ಹಾಡವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ ನಾಯ್ಕ, ತೋಟಗಾರಿಕೆ ಇಲಾಖೆಯ ಎಚ್.ಕೆ.ಬೀಳಗಿ, ರೇಷ್ಮೆ ಇಲಾಖೆಯ ಡಾ.ಸಂಧ್ಯಾ ಭಟ್, ಪಿಡಿಓ ಯಾದವ ನಾಯ್ಕ, ಗ್ರಾಮ ಪಂಚಾಯತಿ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಪಾಲಕ- ಪೋಷಕರು, ಊರ ನಾಗರಿಕರು ಭಾಗವಹಿಸಿದ್ದರು.
ಉದ್ಯಮಿಗಳಾದ ಜೀವನ ಶೆಟ್ಟಿ ಅವರು ಎಲ್ಲಾ ಮಕ್ಕಳಿಗೆ ಕನ್ನಡ ಧ್ವಜವನ್ನು ಕೊಡುಗೆಯಾಗಿ ನೀಡಿದರು. ಸಿಆರ್‌ಪಿ ಸುರೇಶ್ ಮುರ್ಡೇಶ್ವರ ಹಾಗೂ ಶ್ರೀನಿವಾಸ ಉಪಾಧ್ಯಾಯ ಮಾತನಾಡಿದರು. ಮುಖ್ಯಾಧ್ಯಾಪಕ ಡಾ.ಸುರೇಶ ತಾಂಡೇಲ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾರುತಿ ನಾಯ್ಕ ಸಂಕಲ್ಪ ವಿಧಿ ಬೋಧಿಸಿದರು. ಕುಮಾರ ನಾಯ್ಕ ವಂದಿಸಿದರೆ, ಆನಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.