ಕಾರವಾರ: ದೀಪಾವಳಿ ಹಬ್ಬ ಬಂತೆಂದರೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜೂಜಾಟ ಹೆಚ್ಚಾಗಿ ನಡೆಯುತ್ತದೆ. ಆದರೆ ಈ ಬಾರಿ ಈ ಜೂಜಾಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಕಠಿಣ ಕ್ರಮ ಕೈಗೊಂಡ ಪರಿಣಾಮ ಬಹುತೇಕ ಕಡೆ ಈ ಆಟಗಳಿಗೆ ಬ್ರೇಕ್ ಬಿದ್ದಿದೆ.
ಒಂದೆಡೆ ಜನತೆ ದೀಪಾವಳಿ ಸಂಭ್ರಮದಲ್ಲಿ ತೊಡಗಿದರೆ, ಇನ್ನೊಂದೆಡೆ ಇಸ್ಪೀಟ್, ಕೋಳಿಅಂಕ, ಓಸಿ, ಮಟ್ಕಾ, ಕುಟುಕುಟಿ ಮಂಡ ಸೇರಿದಂತೆ ವಿವಿಧ ಬಗೆಯ ಜೂಟಾಟಗಳನ್ನ ನಡೆಸಲಾಗುತ್ತದೆ. ಇಂತಹ ಜೂಜಾಟದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ಸಹ ನಡೆಯುತ್ತದೆ. ಅದರಲ್ಲೂ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ಹಳಿಯಾಳ, ದಾಂಡೇಲಿ, ಮುಂಡಗೋಡ ಸೇರಿದಂತೆ ಕೆಲ ಭಾಗದಲ್ಲಿ ಅಂದರ್- ಬಾಹರ್ ಇಸ್ಪೀಟ್ ದೀಪಾವಳಿ ವಿಶೇಷವಾಗಿ ಹಿಂದಿನಿಂದಲೂ ಕೆಲವರು ಆಡಿಸಿಕೊಂಡು ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿತ್ತು. ಈ ಹಿಂದೆಲ್ಲ ಪೊಲೀಸರು ಹಬ್ಬವೆಂದು ಸುಮ್ಮನಿರುತ್ತಿದ್ದರೆನ್ನಲಾಗಿದೆ.
ಆದರೆ ಈ ಬಾರಿ ಮಾತ್ರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಹಬ್ಬದ ಸಂದರ್ಭದಲ್ಲೂ ಕೊಂಚವೂ ಸಡಿಲಿಕೆ ನೀಡಿಲ್ಲ. ಹಬ್ಬಕ್ಕೂ ಮುನ್ನ ಎಲ್ಲೂ ಜೂಜಾಟಕ್ಕೆ ಅವಕಾಶ ಕೊಡದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಿದ್ದರ ಪರಿಣಾಮವಾಗಿ ಬಹುತೇಕ ಕಡೆ ಈ ಬಾರಿಯ ಹಬ್ಬದ ಜೂಜಾಟಕ್ಕೆ ಬ್ರೇಕ್ ಬಿದ್ದಂತಾಗಿದೆ. ಕೇವಲ ಆಯಾ ಠಾಣೆಗಳ ಪೊಲೀಸರಿಂದಷ್ಟೇ ಅಲ್ಲ, ದೊಡ್ಡ ದೊಡ್ಡ ಜೂಜು ಅಡ್ಡೆಗಳ ಮೇಲೆ ತಮ್ಮ ವಿಶೇಷ ಪೊಲೀಸ್ ವಿಭಾಗದಿಂದ ದಾಳಿ ನಡೆಸಿ ಈ ಬಾರಿ ಇಂಥ ಅಡ್ಡೆಕೋರರಿಗೆ ಮತ್ತೆ ಸಿಂಹಸ್ವಪ್ನವಾಗಿ ಕಾಣಿಸಿಕೊಂಡಿದ್ದಾರೆ ಎಸ್ಪಿ. ಜಿಲ್ಲೆಯಲ್ಲಿ ಎಲ್ಲೇ ಇಸ್ಪೀಟ್, ಓಸಿ, ಮಟ್ಕಾ, ಕೋಳಿ ಅಂಕದಂಥ ಜೂಜಾಟಗಳು ನಡೆದರೂ ಮುಲಾಜಿಲ್ಲದೇ ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಂಧಿಸುವಂತೆ ಡಾ.ಪೆನ್ನೇಕರ್ ಅವರು ನೀಡಿದ ಸೂಚನೆಯ ಮೇರೆಗೆ ಕಳೆದ ಮೂರು ದಿನಗಳಲ್ಲಿ ಕುಮಟಾ, ಶಿರಸಿ, ಮುಂಡಗೋಡ, ಭಟ್ಕಳ ಸೇರಿದಂತೆ ಹಲವೆಡೆ ಜೂಜಾಟ ನಡೆಸುತ್ತಿದ್ದ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಮಾತ್ರ ಆಡಿಸುತ್ತೇವೆ, ನಂತರ ಸುಮ್ಮನಾಗುತ್ತೇವೆ ಎಂದು ಪೊಲೀಸರಿಗೂ ಮನವೊಲಿಸಿ ಇಷ್ಟು ವರ್ಷಗಳ ಕಾಲ ದಂಧೆ ನಡೆಸಿದ್ದ ದಂಧೆಕೋರರಿಗೆ ಎಸ್ಪಿಯವರ ಈ ನಡೆ ಮೈ ಚಳಿ ಬಿಡಿಸಿದ್ದಷ್ಟೇ ಅಲ್ಲದೇ, ಇಂಥ ದಂಧಾಕೋರರಿಗೆ ಇಷ್ಟು ವರ್ಷ ಕೃಪೆ ನೀಡುತ್ತಿದ್ದ ಕೆಲ ರಾಜಕಾರಣಿಗಳ ಕಣ್ಣನ್ನೂ ಮತ್ತೆ ಕೆಂಪಗಾಗಿಸಿದೆ.
ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಜಿಲ್ಲಾ ಪೊಲೀಸರಿಗೆ ಬಂದಿತ್ತು. ಧಾರವಾಡ, ಹಾವೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 40ಕ್ಕೂ ಅಧಿಕ ಜನರು ಅಂದರ್- ಬಾಹರ್ ಆಟ ಆಡುತ್ತಿದ್ದರು ಎನ್ನಲಾಗಿತ್ತು. ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದ್ದು, ಇದರ ಹಿಂದೆ ತಾಲೂಕಿನ ಗ್ರಾಮೀಣ ಭಾಗದ ಪ್ರಭಾವಿ ಮುಖಂಡರ ಕೃಪಾಕಟಾಕ್ಷವೂ ಇತ್ತು ಎನ್ನಲಾಗಿತ್ತು. ಆದರೆ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸುವುದರೊಳಗೆ ದಾಳಿಯ ವಿಷಯ ಸೋರಿಕೆಯಾಗಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.