ಹಳಿಯಾಳ: ರೈತರ ಬೆವರಿನ ಪ್ರತಿಯೊಂದು ಹನಿಗೂ ಬೆಲೆ ಸಿಗುವವರೆಗೂ ಹೋರಾಟ ನಿಲ್ಲಿಸುವುದು ಬೇಡ. ಈಐಡಿ ಪ್ಯಾರಿ ಕಾರ್ಖಾನೆ ರೈತರ ನ್ಯಾಯಯುತ ಬೇಡಿಕೆ ಈಡೇರಿಸದೇ ಇದ್ದರೆ ನನ್ನ ಸಮಾಧಿಯನ್ನು ಕಾರ್ಖಾನೆಯ ರಸ್ತೆಯಲ್ಲಿಯೇ ಮಾಡಬೇಕಾಗಬಹುದು ಎಂದು ಧಾರವಾಡದ ಶ್ರೀಕ್ಷೇತ್ರ ದ್ವಾರಪುರಮ್‌ನ ಶ್ರೀಪರಮಾತ್ಮ ಮಹಾಸಂಸ್ಥಾನದ ಪೀಠಾಧೀಶ್ವರ ಡಾ.ಪರಮಾತ್ಮಾಜಿ ಮಹಾರಾಜ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಆಡಳಿತ ಸೌಧದ ಎದುರು ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಗುರುವಾರಕ್ಕೆ ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನ್ಯಾಯ ದೊರಕುವವರೆಗೂ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವುದು ಬೇಡ. ನ್ಯಾಯಕ್ಕಾಗಿ ಹೋರಾಟವನ್ನು ಇನ್ನೂ ತೀವ್ರಗೊಳಿಸೋಣ, ಒಗ್ಗಟ್ಟಿನಿಂದ ಹೋರಾಡೋಣ. ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಅ.28ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ. ಇದಕ್ಕೆ ಹಲವು ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಕೆ ಹಳ್ಳಿ ಶ್ರೀಗುರು ನಿತ್ಯಾನಂದ ಆಶ್ರಮದ ಸದ್ಗುರು ಸುಬ್ರಹ್ಮಣ್ಯ ಸ್ವಾಮೀಜಿ ಮಾತನಾಡಿ, ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಕಾರ್ಖಾನೆಯವರು ರೈತರ ಶ್ರಮಕ್ಕೆ ತಕ್ಕುದಾದ ಬೆಲೆ ನೀಡಬೇಕು, ರೈತರಿಗೆ ಮೊಸ ಮಾಡದೆ ಪರಮಾತ್ಮ ಮೆಚ್ಚುವ ರೀತಿಯಲ್ಲಿ ರೈತರ ಬೇಡಿಕೆ ಈಡೇರಿಸಲು ಸರ್ಕಾರ ಕೂಡ ಮುಂದಾಗಬೇಕು ಎಂದರು.
ಕಬ್ಬು ಬೆಳೆಗಾರ ಸಂಘದ ಉಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ, ಹಳಿಯಾಳದ ರಾಜಕೀಯ ವ್ಯವಸ್ಥೆ ರೈತರ ಪ್ರತಿಭಟನೆಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ನ್ಯಾಯ ದೊರಕುವವರೆಗೂ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಹಳಿಯಾಳ ಆದೀಶಕ್ತಿ ಪಿಠದ ಶ್ರೀಕೃಷ್ಣಾನಂದ ಭಾರತಿ ಸ್ವಾಮಿಜಿ, ಅಮ್ಮನಕೊಪ್ಪದ ಲಕ್ಷ್ಮಣ ಸ್ವಾಮಿಜಿ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪಾ ಪೂಜಾರಿ, ಮಾಜಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ, ಕಾಳಿ ಬ್ರಿಗೇಡ್ ಅಧ್ಯಕ್ಷ ರವಿ ರೇಡ್ಕರ್, ಪ್ರಮುಖರಾದ ಎನ್ ಎಸ್ ಜಿವೋಜಿ, ಶಂಕರ ಕಾಜಗಾರ, ಅಶೋಕ ಮೇಟಿ, ಎಮ್ ವಿ ಘಾಡಿ, ಅಪ್ಪಾರಾವ ಪೂಜಾರಿ ಸೇರಿದಂತೆ ಇತರರು ಇದ್ದರು.