ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆಯಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಹಂತದಲ್ಲಿ ಆತಂಕ ಪಡಿಸಬೇಡಿ, ಅರಣ್ಯ ಸಿಬ್ಬಂದಿಗಳಿಗೆ ಮಾನವಿಯತೆಯಿಂದ ವರ್ತಿಸಲು ನಿರ್ದೇಶನ ನೀಡಿ, ಒಕ್ಕಲೆಬ್ಬಿಸುವಾಗ ಕಾನೂನಿನ ವಿಧಿ ವಿಧಾನ ಅನುಸರಿಸದೇ ಒಕ್ಕಲೆಬ್ಬಿಸಬೇಡಿ, ಅಸಮರ್ಪಕ ಜಿಪಿಎಸ್ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಸರಕಾರ ಮತ್ತು ಕಾನೂನಿನ ವಿಧಿ ವಿಧಾನ ಅನುಸರಿಸಿ ಇಲ್ಲದಿದ್ದಲ್ಲಿ ಅರಣ್ಯವಾಸಿಗಳ ಆಕ್ರೋಶಕ್ಕೆ ಕಾರಣವಾಗುತ್ತೀರಿ ಎಂಬ ಮಾತುಗಳು ಅರಣ್ಯವಾಸಿ ಮುಖಂಡರಿಂದ ಕೇಳಿಬಂದವು.
ಸಿದ್ಧಾಪುರ ತಾಲೂಕಿನ, ಕ್ಯಾದಗಿ ವಲಯ ಅರಣ್ಯಾಧಿಕಾರಿ ಕಚೇರಿಗೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ಸಾಮಾಜಿಕ ಧುರೀಣ ವಸಂತ ನಾಯ್ಕ ಅವರ ನೇತ್ರತ್ವದಲ್ಲಿ ಅರಣ್ಯ ಸಿಬ್ಬಂದಿಗಳಿಂದ ಸಮಸ್ಯೆಗೆ ಒಳಗಾದ ವಿವಿಧ ಅರಣ್ಯ ಅತಿಕ್ರಮಣದಾರ ನಿಯೋಗವು ವಲಯ ಅರಣ್ಯ ಅಧಿಕಾರಿ ಅಜಯ್ ಕುಮಾರ ಅವರ ಜೊತೆ ಚರ್ಚೆಯ ಸಂದರ್ಭದಲ್ಲಿ ಮೇಲಿನಂತೆ ಮಾತುಗಳು ಕೇಳಿಬಂದವು.
ನಿರಂತರ ಅರಣ್ಯವಾಸಿಗಳ ಸಮಸ್ಯೆಗೆ ಸರಕಾರದ, ಸಭಾಧ್ಯಕ್ಷರ ಹೇಳಿಕೆಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳನ್ನು ದೌರ್ಜನ್ಯ ಒಳಪಡಿಸುವ ಕುರಿತು ತಿಳಿಸಲಾಯಿತು. ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು ಹಿಂಸಿಸುವ, ದೌರ್ಜನ್ಯಕ್ಕೆ ಒಳಪಡಿಸುವ ಮತ್ತು ಅಮಾನವಿಯತೆಯ ಅರಣ್ಯ ಸಿಬ್ಬಂದಿಗಳ ವರ್ತನೆಯನ್ನು ನಿಯಂತ್ರಿಸಲು ಚರ್ಚೆಯ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಿಗೆ ಆಗ್ರಹಿಸಲಾಯಿತಲ್ಲದೇ ಇಂತಹ ಘಟನೆಗಳು ಪುನರಾವರ್ತನೆ ಆಗಿದ್ದಲ್ಲಿ ಗಂಭೀರ ರೂಪದ ಹೋರಾಟ ಮಾಡಲಾಗುವುದೆಂದು ಹೋರಾಟಗಾರರು ಎಚ್ಚರಿಕೆ ನೀಡಿದರು. ಅರಣ್ಯವಾಸಿಗಳ ಸಮಸ್ಯೆಗಳನ್ನ ನಿಯಂತ್ರಿಸುವಲ್ಲಿ ಕಾನೂನಾತ್ಮಕ ಕಾರ್ಯ ಜರುಗಿಸಲಾಗುವುದೆಂದು ವಲಯ ಅರಣ್ಯ ಅಧಿಕಾರಿ ಅಜಯ್ ಕುಮಾರ ಹೇಳಿದರು.
ಸಮಸ್ಯೆಗೆ ಸ್ಫಂದಿಸಿ: ಸ್ಥಳೀಯ ಅರಣ್ಯವಾಸಿ ಸಮಸ್ಯೆಗಳನ್ನ ಕಾನೂನಾತ್ಮಕ ಮತ್ತು ಮಾನವಿಯತೆಯಿಂದ ಸ್ಫಂದಿಸಿ, ಅರಣ್ಯವಾಸಿಗಳು ಮೂಲಭೂತ ಸೌಲಭ್ಯದಿಂದ ವಂಚಿತರಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಚರ್ಚೆಯಲ್ಲಿ ಬಿಎಸ್‌ಎನ್‌ಡಿಪಿ ಅಧ್ಯಕ್ಷ ವಿನಾಯಕ ನಾಯ್ಕ, ಕೆಟಿ ನಾಯ್ಕ ಕ್ಯಾದಗಿ, ಸಿಆರ್ ನಾಯ್ಕ, ಪಾಂಡುರಂಗ ನಾಯ್ಕ, ಸುರೇಶ್ ನಾಯ್ಕ ಕ್ಯಾದಗಿ, ಗ್ರಾಮ ಪಂಚಾಯತ ಸದಸ್ಯ ರಾಜು ನಾಯ್ಕ, ಬೊಮ್ಮು ಶಿವಪ್ಪ ಗೌಡ, ಬಿಡಿ ನಾಯ್ಕ, ಸುನೀಲ್ ನಾಯ್ಕ ಸಂಪಖಂಡ, ರವಿ ಕುಮಾರ ನಾಯ್ಕ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.