Slide
Slide
Slide
previous arrow
next arrow

ದೀವಗಿಯಲ್ಲಿ ಮೇಲ್ಸೇತುವೆ, ಸರ್ವಿಸ್ ರಸ್ತೆಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

300x250 AD


 ಕುಮಟಾ: ತಾಲೂಕಿನ ದೀವಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇಲ್ಸೇತುವೆ, ಸರ್ವಿಸ್ ರಸ್ತೆ, ಹೆದ್ದಾರಿ ದೀಪ ಹಾಗೂ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ದೀವಗಿ ಹಿತರಕ್ಷಣಾ ಸಮಿತಿ ವತಿಯಿಂದ ಅಲ್ಲಿನ ಗ್ರಾಮಸ್ಥರರು ಪ್ರತಿಭಟನಾ ಮೆರವಣಿಗೆ ನಡೆಸಿ ಪಂಚಾಯತದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ದೀವಗಿಯ ಕೆಳಗಿನಕೇರಿಯಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯವರೆಗೆ ತೆರಳಿ, ಹೆದ್ದಾರಿ ಕಾಮಗಾರಿ ಪಡೆದ ಆಯ್ ಆರ್ ಬಿ ಕಂಪನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ದೀವಗಿ ಗ್ರಾ.ಪಂ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಕಳೆದ ಐದು ವರ್ಷಗಳಿಂದ ದೀವಗಿ ಗ್ರಾಮಸ್ಥರು ನವಗ್ರಾಮಕ್ಕೆ ಹೋಗುವ ಹೆದ್ದಾರಿ ಮಧ್ಯೆ ಮೇಲ್ಸೇತುವೆ ಹಾಗೂ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸುತ್ತಲೇ ಬರಲಾಗಿದೆ. ಇಂದಿಗೂ ಯಾವುದೇ ಪ್ರಯೋಜನವಾಗಿಲ್ಲ. ಐ ಆರ್ ಬಿ ಕಂಪನಿ ರಸ್ತೆ ಕಾಮಗಾರಿ ಆರಂಭಿಸಿದಾಗಿನಿಂದಲೂ ಈ ಭಾಗದಲ್ಲಿ ಒಂದಲ್ಲ ಒಂದು ಸಮಸ್ಯೆಗಳನ್ನು ತಂದೊಡ್ಡುತ್ತಿದ್ದು, ಇದರಿಂದಾಗಿ ಪ್ರತಿನಿತ್ಯ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತಗಳ ಸಂಖ್ಯೆ ಜಾಸ್ತಿಯಾಗಿದೆ. ಸಮೀಪದಲ್ಲಿ ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ ಇರುವುದರಿಂದ ನೂರಾರು ಮಕ್ಕಳು ಓಡಾಡುತ್ತಾರೆ. ಒಮ್ಮೆಲೇ ಬರುವ ವಾಹನದಿಂದಾಗಿ ರಸ್ತೆ ದಾಟುವುದು ಕಷ್ಟಸಾಧ್ಯ. ಹೀಗಾಗಿ ಈ ಭಾಗದಲ್ಲಿ ಮೇಲ್ಸೇತುವೆ, ಸರ್ವಿಸ್ ರಸ್ತೆ ಹಾಗೂ ಹೈಮಾಸ್ಟ್ ದೀಪಗಳನ್ನು ಅಳವಡಿಸುವಂತಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಅವರಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ, ರಾಷ್ಟ್ರೀಯ ಹೆದ್ದಾರಿಯ ದೀವಗಿ ಬಳಿ ಸಮಸ್ಯೆ ಇರುವುದು ಸತ್ಯ. ಹೀಗಾಗಿ ಸರಿಪಡಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇಲ್ಲಿನ ಸಮಸ್ಯೆಯನ್ನು ಎನ್.ಎಚ್.ಐ ಪ್ರಾಜೆಕ್ಟ್ ಡೈರೆಕ್ಟರ್ ಬಳಿ ತಿಳಿಸಿ ಆ ಮೂಲಕ ಅವರ ಸೂಚನೆಯಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು. ಈ ಭರವಸೆಗಳಿಗೆ ಒಪ್ಪದ ಗ್ರಾಮಸ್ಥರು ಚತುಷ್ಪಥದ ಒಂದು ಮಾರ್ಗವನ್ನು ಬಂದ್ ಮಾಡಿ, ಅದನ್ನು ಸರ್ವಿಸ್ ರಸ್ತೆಯನ್ನಾಗಿಸಿ, ಓಡಾಡುತ್ತೇವೆ. ಇಲ್ಲವಾದರಲ್ಲಿ ಹೆದ್ದಾರಿಯ ಎರಡು ಕಡೆ ಬ್ಯಾರಿಕೇಟ್ ಅಳವಡಿಸಬೇಕೆಂದು ಪಟ್ಟು ಹಿಡಿದರು. ಬಳಿಕ ಸಹಾಯಕ ಆಯುಕ್ತರು ಎನ್‌ಎಚ್‌ಐ ಅಧಿಕಾರಿಗಳನ್ನು ಸಂಪರ್ಕಿಸಿ, ಎರಡು ದಿನಗಳಲ್ಲಿ ದೀವಗಿಗೆ ಭೇಟಿ ನೀಡುವಂತೆ ಸೂಚಿಸಿದ್ದೇನೆ. ಅವರ ಸಮ್ಮುಖವೇ ಈ ಬಗ್ಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೇ ತುರ್ತಾಗಿ ಬ್ಯಾರಿಕೇಡ್ ಅಳವಡಿಸಲು ಒಪ್ಪಿಗೆ ನೀಡಿದರು.
ಪ್ರತಿಭಟನೆಯಲ್ಲಿ ದೀವಗಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಆರ್.ಕೆ.ಅಂಬಿಗ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ, ದೀವಗಿ ಗ್ರಾ.ಪಂ ಸದಸ್ಯ ವಿನಾಯಕ ದೇಶಭಂಡಾರಿ, ಫ್ರೆಂಕಿ ಫರ್ನಾಂಡೀಸ್, ಮಂಗಲಾ ಭಟ್, ಪ್ರಮುಖರಾದ ಮೈಕಲ್ ಫರ್ನಾಂಡೀಸ್, ಗಂಗಾಧರ ಅಂಬಿಗ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top