ಕುಮಟಾ: ಎನ್‌ಡಬ್ಲುಕೆಎಸ್‌ಆರ್‌ಟಿಸಿಯು ವೀಕೆಂಡ್‌ನಲ್ಲಿ ಘೋಷಿಸಿರುವ ಪ್ರವಾಸಿ ಪ್ಯಾಕೇಜ್‌ಗಳನ್ನು ರದ್ದು ಪಡಿಸುವಂತೆ ಮತ್ತು ವೈಟ್ ಬೋರ್ಡ್ ಕಾರನ್ನು ಬಳಸಿ ಬಾಡಿಗೆ ಹೊಡೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಟ್ಯಾಕ್ಸಿ ಯೂನಿಯನ್‌ಗಳ ಚಾಲಕರು, ಮಾಲಕರು ಪಟ್ಟಣದ ಮಣಕಿ ಮೈದಾನದಲ್ಲಿ ಜಮಾಯಿಸಿ, ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ ಟ್ಯಾಕ್ಸಿ ಯೂನಿಯನ್‌ವರು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಗಮನಕ್ಕೆ ತಂದರು. ಟ್ಯಾಕ್ಸಿ ಚಾಲಕರ ಮಾಲಕರ ಮನವಿಗೆ ಸ್ಪಂದಿಸಿದ ಶಾಸಕರು, ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳಿಗೆ ವೈಟ್ ಬೋರ್ಡ್ ಕಾರುಗಳಲ್ಲಿ ಬಾಡಿಗೆ ಹೊಡೆಯುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಮಣಕಿ ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಹೆದ್ದಾರಿ ಮೂಲಕ ಗಿಬ್ ಸರ್ಕಲ್‌ಗೆ ತೆರಳಿ ಅಲ್ಲಿಂದ ನೇರವಾಗಿ ಸಹಾಯಕ ಆಯುಕ್ತರ ಕಚೇರಿ ಎದುರು ಸಮಾವೇಶಗೊಂಡಿತು. ಸಾರಿಗೆ ಸಂಸ್ಥೆಯಿಂದ ವೀಕೆಂಡ್‌ಗಳಲ್ಲಿ ಘೋಷಿಸಲಾದ ಪ್ರವಾಸಿ ಪ್ಯಾಕೇಜ್‌ಗಳನ್ನು ರದ್ದು ಪಡಿಸುವ ಜೊತೆಗೆ ಬಾಡಿಗೆ ಹೊಡೆಯುತ್ತಿರುವ ವೈಟ್ ಬೋರ್ಡ್ ಕಾರ ಮಾಲೀಕರ ವಿರುದ್ಧ ಕ್ರಮ ವಹಿಸುವಂತೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಆರ್.ಜಿ.ನಾಯ್ಕ, ಸಾರಿಗೆ ಸಂಸ್ಥೆಯವರು ಇತ್ತೀಚೆಗೆ ಶನಿವಾರ ಮತ್ತು ಭಾನುವಾರ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ರೂಪದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ದೊರೆಯದಂತಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರನ್ನೆ ನಂಬಿ ಬದುಕು ಸಾಗಿಸುತ್ತಿರುವ ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುವಂತಾಗಿದೆ. ಈಗ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯುವ ಮೂಲಕ ಟ್ಯಾಕ್ಸಿ ಚಾಲಕರ ಬದುಕು ನಡೆಸಲು ಅವಕಾಶ ಮಾಡಿಕೊಡಬೇಕು. ಅಲ್ಲದೇ ಜಿಲ್ಲೆಯಲ್ಲಿ ಅನಧಿಕೃತವಾಗಿ ಬಾಡಿಗೆ ಹೊಡೆಯುತ್ತಿರುವ ವೈಟ್ ಮತ್ತು ಬ್ಲಾಕ್ ಬೋರ್ಡ್ಗಳ ವಾಹನ ಮಾಲೀಕರ ವಿರುದ್ಧ ಕ್ರಮವಹಿಸಬೇಕು. ಗೋಕರ್ಣದಲ್ಲಿ ಬೈಕ್‌ನ್ನು ಮತ್ತು ಜೂಮ್ ಕಾರನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಅಂತವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ವಹಿಸುವ ಮೂಲಕ ಟ್ಯಾಕ್ಸಿ ಚಾಲಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಈ ಬಗ್ಗೆ ಎಸಿ ಜೊತೆಗೆ ಸಮಾಲೋಚಿಸಿ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ಜಿಲ್ಲಾಧ್ಯಕ್ಷ ನವೀನ ನಾಯ್ಕ, ಗೋಕರ್ಣದ ಶ್ರೀಮಹಾಬಲೇಶ್ವರ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ನಾರಾಯಣ ನಾಯ್ಕ, ಹೊನ್ನಾವರ ಯೂನಿಯನ್ ಅಧ್ಯಕ್ಷ ಶ್ರೀಕಾಂತ ಮೇಸ್ತಾ, ಬಸೀರ್ ಸಾಬ್, ಮುರ್ಡೇಶ್ವರ ಯೂನಿಯನ್ ಅಧ್ಯಕ್ಷ ರಾಘವೇಂದ್ರ ನಾಯ್ಕ, ಶ್ರೀನಿವಾಸ ನಾಯ್ಕ, ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ರಾಜೇಶ ಚೋಡನಕರ್, ಉಪಾಧ್ಯಕ್ಷ ಅಶೋಕ ಅಂಬಿಗ, ಕಾರ್ಯದರ್ಶಿ ಅನಂತ ಗೌಡ, ಕುಮಟಾ ಯೂನಿಯನ್ ಪದಾಧಿಕಾರಿಗಳಾದ ಸಂದೀಪ ಗೌಡ, ಕಿರಣ ಭಂಡಾರಿ, ಸೇರಿದಂತೆ ವಿವಿಧ ತಾಲೂಕುಗಳ ಟ್ಯಾಕ್ಸಿ ಚಾಲಕರು, ಮಾಲಕರು ಸುಮಾರು ಐದು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ನಿಂದ ಪ್ರತಿಭಟನೆ
