ಹೊನ್ನಾವರ: ತಾಲೂಕಿನ ಗುಣವಂತೆಯ ನೀಲೇಕೇರಿಯಲ್ಲಿ ಶ್ರೀ ಸದ್ಗುರ ಸೇವಾ ಅಭಿವೃದ್ಧಿ ಟ್ರಸ್ಟ್ ಉದ್ಘಾಟನೆಯನ್ನು ಶಾಸಕ ಸುನೀಲ ನಾಯ್ಕ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಆರಂಭಗೊಂಡ ಈ ಟ್ರಸ್ಟ್ ನೊಂದವರ ಬಾಳಿನ ದೀವಿಗೆಯಾಗಲಿ. ಒಗ್ಗಟ್ಟಾಗಿ ಸೇವಾ ಮನೋಭಾವದಿಂದ ಆರಂಭಿಸಿದ್ದು ತಾಲೂಕಿಗೆ ಮಾದರಿಯಾಗುವಂತೆ ಮನ್ನಡೆಯಲಿ. ಮೂರು ಗುಂಟೆ ಜಾಗ ನೀಡಿದರೆ ಶಾಸಕ ನಿಧಿಯಿಂದ 5 ಲಕ್ಷ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಮಾವಿನಕುರ್ವಾ ಗ್ರಾ.ಪಂ. ಅಧ್ಯಕ್ಷ, ಸೇಫ್ ಸ್ಟಾರ್ ಗ್ರೂಪ್ ಮ್ಯಾನೇಜಿಂಗ್ ಡೈರಕ್ಟರ್ ಜಿ.ಜಿ.ಶಂಕರ ಮಾತನಾಡಿ, ಶಂಭು ಗೌಡರ ಗರಡಿಯಲ್ಲಿ ಪಳಗಿ ಶಾಸಕರಾದ ಸುನೀಲ ನಾಯ್ಕ ಹಲವು ಅಭಿವೃದ್ಧಿ ಕಾರ್ಯದ ಮೂಲಕ ಜನಾನುರಾಗಿಯಾಗಿದ್ದಾರೆ. ಈ ಟ್ರಸ್ಟ್ ಸಮಾಜಮುಖಿ ಕಾರ್ಯದ ಮೂಲಕ ಮಾದರಿಯಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸದ್ಗುರ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಾನಂದ ನಾಯ್ಕ ಮಾತನಾಡಿ, ಸಮಾಜದಲ್ಲಿರುವ ದುರ್ಬಲ ಜನರಿಗೆ ಸಹಾಯ ಸಹಕಾರ ನೀಡುವ ಜೊತೆ ಶಿಕ್ಷಣ ಕೇತ್ರದಲ್ಲಿ ಸಾಧಕರಿಗೆ ಪೊತ್ಸಾಹಿಸಿ, ಸರ್ಕಾರದಿಂದ ಬರುವ ಸೌಲಭ್ಯವನ್ನು ಜನರಿಗೆ ತಲುಪುವಂತೆ ಮಾಡುವುದು ಟ್ರಸ್ಟ್ ಪ್ರಮುಖ ಉದ್ದೇಶವಾಗಿದೆ ಎಂದು ಕಾರ್ಯವೈಖರಿಯನ್ನು ವಿವರಿಸಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು, ಸಾಧನೆ ಮಾಡಿದ ವಿಧ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕೆಳಗಿನೂರು ಗ್ರಾ.ಪಂ. ಸದಸ್ಯ ಶಿವಾನಂದ ಗೌಡ, ಟ್ರಸ್ಟ್ ಗೌರವಾಧ್ಯಕ್ಷ ಮಾಧವ ಪಂಡಿತ್, ಎಮ್.ಆರ್.ಹೆಗಡೆ, ಗಣೇಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿದವು.