ದಾಂಡೇಲಿ: ನಗರದ ಸಮೀಪದಲ್ಲಿರುವ ಹೊಸ ಕೊಣಪಾ ಗ್ರಾಮದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ರೈತರಲ್ಲಿ ಆತಂಕ ಮನೆ ಮಾಡಿದೆ.
ಸ್ಥಳೀಯ ರೈತರಾದ ಕಮಲ ಬಾಬು ಕೇದಾರಿ ಇವರ ಹೊಲದಲ್ಲಿ ಕಂಡು ಬಂದ ಮೊಸಳೆಯ ಮರಿಯೊಂದನ್ನು ಸ್ಥಳೀಯರು ಹಿಡಿದಿದ್ದು, ಅದನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯ ರೈತರು ಆಗ್ರಹಿಸಿದ್ದಾರೆ. ಹೊಸ ಕೊಣಪಾ ಗ್ರಾಮದ ರೈತರ ಹೊಲ ಗದ್ದೆಗಳಲ್ಲಿ ಮೊಸಳೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರತೊಡಗಿದ್ದು, ರೈತರಿಗೆ ತಮ್ಮ ಸಾಕು ಪ್ರಾಣಿಗಳಾದ ದನ ಕರುಗಳನ್ನು, ಎಮ್ಮೆ, ಕೋಣಗಳನ್ನು ತಮ್ಮ ಹೊಲ ಗದ್ದೆಗಳ ಹತ್ತಿರ ಮೇಯಲು ಬಿಡಲು ಭಯದ ವಾತಾವರಣ ನಿರ್ಮಾಣವಾಗಿದೆ.
ಮೊಸಳೆಗಳ ಹಾವಳಿಯಿಂದ ಸಾಕು ಪ್ರಾಣಿಗಳ ಜೊತೆಗೆ ಸ್ಥಳೀಯ ರೈತರ ಮಕ್ಕಳಿಗೂ ಅಪಾಯವಾಗುವ ಸಾಧ್ಯತೆಯಿದ್ದು, ಕೂಡಲೆ ಈ ಬಗ್ಗೆ ಅರಣ್ಯ ಇಲಾಖೆಯವರು ಅಗತ್ಯ ಕ್ರಮವನ್ನು ಕೈಗೊಂಡು, ಇಲ್ಲಿರುವ ಮೊಸಳೆಗಳನ್ನು ಸ್ಥಳಾಂತರಿಸಿ, ಸ್ಥಳೀಯ ರೈತರಲ್ಲಿರುವ ಆತಂಕವನ್ನು ದೂರ ಮಾಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಸುರೇಶ ಕೇದಾರಿ ಹಾಗೂ ಸಂಘಟನೆಯ ಪ್ರಮುಖರುಗಳಾದ ಅರ್ಜುನ್ ಬೆಳ್ವೋಡಿ, ರೇಣುಕಾ ಮೇಲ್ಗೇರಿ, ಗಂಗಪ್ಪಾ ವಡ್ಡರ, ಹಿರಿಯ ಮುಖಂಡರಾದ ದತ್ತು ಮಾಳಗೆ, ಕಸ್ತೂರಿ ಕಾಂಬಳೆ, ಲಕ್ಷ್ಮಿ ಕಾಂಬಳೆ ಮೊದಲಾದವರು ಮನವಿ ಮಾಡಿದ್ದಾರೆ.