Slide
Slide
Slide
previous arrow
next arrow

ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ವಿದ್ಯಾಧೀಶ ತೀರ್ಥರ ಪಾದ ಪೂಜೆ

300x250 AD

ಕುಮಟಾ: ಪಟ್ಟಣದ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಕಣ್ಣಿನ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ಗೋಕರ್ಣದ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಗಳಿಗೆ ಪಾದ ಪೂಜೆ ನೆರವೇರಿಸಲಾಯಿತು.
ಪಟ್ಟಣದ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ ಗೋಕರ್ಣದ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಗಳು ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿ ಖುಷಿಪಟ್ಟರು. ಇತ್ತೀಚೆ ಸುಂದರವಾಗಿ ನವೀಕೃತಗೊಂಡ ಸುಸಜ್ಜಿತ ಆಸ್ಪತ್ರೆಯ ಕೊಠಡಿಗಳನ್ನೆಲ್ಲ ವೀಕ್ಷಿಸಿದ ಶ್ರೀಗಳು ನೂತನವಾಗಿ ಅಳವಡಿಸಿದ ಎಲ್ಲ ಅತ್ಯಾಧುನಿಕ ಯಂತ್ರೋಪಕರಣಗಳ ಕುರಿತಾಗಿ ಆಸ್ಪತ್ರೆಯ ನೇತ್ರ ತಜ್ಞ ಡಾ.ಮಲ್ಲಿಕಾರ್ಜುನ್ ಮತ್ತು ಡಾ.ಮೇಘಾ ದಿವಾಕರ್ ಅವರಿಂದ ಅವಶ್ಯಕ ಮಾಹಿತಿ ಪಡೆದರು. ಕಳೆದ 16 ವರ್ಷಗಳಿಂದಲೂ ಆಸ್ಪತ್ರೆಯು ಕೈಕೊಂಡು ಬಂದ ವೈದ್ಯಕೀಯ ಸೇವಾ ಕಾರ್ಯಗಳ ಕುರಿತು ಮಾಹಿತಿ ಪಡೆದ ಶ್ರೀಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಹಾರೈಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಕೇವಲ ಗಳಿಕೆ ಮುಖ್ಯವಲ್ಲ. ಸನ್ಮಾರ್ಗದ ಗಳಿಕೆಯಲ್ಲಿ ಒಂದಿಷ್ಟು ದಾನ ಮಾಡಿದಾಗ ವ್ಯಕ್ತಿಯ ಗೌರವ ಹೆಚ್ಚುತ್ತದೆ. ದಾನ ಮಾಡಿದ ವ್ಯಕ್ತಿಗಳು ಸನ್ಮಾನಿಸಲ್ಪಟ್ಟು ತುಂಬಿದ ಸಭೆಯಲ್ಲಿ ಅವರ ಹೆಸರನ್ನು ಉಲ್ಲೇಖಿಸಿ ಗೌರವಿಸಲ್ಪಡುತ್ತಾರೆ. ಲಯನ್ಸ್ ಕಣ್ಣಿನ ಆಸ್ಪತ್ರೆಗೆ ರೇವಣಕರ ಸಹೋದರರು ಹಾಗೂ ಇನ್ನಿತರ ದಾನಿಗಳು,ಲಯನ್ಸ್ ಬಂಧುಗಳ ಕಾರ್ಯ ಮಹತ್ವದ್ದಾಗಿದ್ದು ನಿಜಕ್ಕೂ ಅನುಕರಣೀಯ. ಮಾನವನ ಸೂಕ್ಷ್ಮ ಅಂಗವಾಗಿರುವ ಕಣ್ಣಿನ ಮಹತ್ವದ ಬಗ್ಗೆ ತಿಳಿಸುತ್ತ ಸಕಾರಾತ್ಮಕವಾಗಿ ನಾವು ನೋಡಬೇಕಾಗಿರುವ ದೃಷ್ಟಿಯ ಕುರಿತು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಡಾ.ಸುರೇಶ ಜಿ.ಹೆಗಡೆ ದಂಪತಿ ಪಾದಪೂಜಾ ಸೇವೆಗೈದರು. ಚೇರಮನ್ ಮದನ ನಾಯಕ ಸ್ವಾಗತಿಸಿದರು. ಸಂಸ್ಥಾಪಕ ಚೇರಮನ್ ಸಿ.ಎಸ್.ವೇರ್ಣೆಕರ್, ಹಿರಿಯ ಟ್ರಸ್ಟಿ ಡಿ.ಡಿ.ಶೇಟ್, ಖಜಾಂಚಿ ರಘುನಾಥ ದಿವಾಕರ, ಟ್ರಸ್ಟಿಗಳಾದ ಡಾ.ಸತೀಶ ವಿ.ಪ್ರಭು, ಎಚ್.ಎನ್.ನಾಯ್ಕ, ಡಾ.ಜಿ.ಜಿ.ಹೆಗಡೆ, ಶ್ರೀನಿವಾಸ ರೇವಣಕರ, ಪಿಡಿಜಿ ಡಾ.ಗಿರೀಶ್ ಕುಚಿನಾಡ, ಲಯನ್ಸ್ ಸದಸ್ಯರು, ಸ್ಥಳೀಯ ಗಣ್ಯರು ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಟ್ರಸ್ಟಿ ವಿ.ಐ.ಹೆಗಡೆ ಸ್ವರಚಿತ ‘ಗುರು ಸ್ಮರಣೆ’ ಸ್ತುತಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top