ಸಿದ್ದಾಪುರ: ಎಲ್ಲ ಧರ್ಮ ಮತ್ತು ಸಮಾಜದವರೊಡನೆ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯನ್ನು ರಚಿಸಲಾಗಿದೆ. ಪ್ರತಿ ಸಮಾಜವೂ ನಮ್ಮದು ಅಂತ ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ ಬರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ, ತಾಪಂ ಮಾಜಿ ಸದಸ್ಯ ನಾಸಿರ್ ವಲಿಖಾನ್ ಹೇಳಿದರು.
ಅವರು ಕಮಿಟಿಯ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದ ಮುರುಘರಾಜೇಂದ್ರ ಅಂಧರ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಕೇವಲ ಮುಸ್ಲಿಂ ಸಮಾಜದವರು ಮಾತ್ರವಲ್ಲ ಬೇರೆ ಧರ್ಮದವರೂ ನಮಗೆ ಹತ್ತಿರದವರೇ. ಎಲ್ಲರಿಗೂ ಉಪಯೋಗವಾಗುವ ಒಳ್ಳೆಯ ಕಾರ್ಯಗಳನ್ನು ಮಾಡುವದು ಕಮಿಟಿಯ ಮುಖ್ಯ ಆಶಯವಾಗಿದೆ ಎಂದರು.
ಕಮಿಟಿಯ ಕಾರ್ಯಾಧ್ಯಕ್ಷ, ಪ.ಪಂ ಮಾಜಿ ಸದಸ್ಯ ಮುನಾವರ ಗುರ್ಕಾರ ಮಾತನಾಡಿ, ಸಂಸ್ಥೆಯ ಮುಖ್ಯ ಉದ್ದೇಶ ಭಾವೈಕ್ಯತೆ. ಯಾವುದೇ ಧರ್ಮದವರಾಗಿರಲಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಅಸಹಾಯಕರಿಗೆ ನೆರವಾಗುವದು ನಮ್ಮ ಉದ್ದೇಶ. ಬೇಧಭಾವವಿಲ್ಲದೇ ಎಲ್ಲರೊಂದಿಗೆ ಒಂದಾಗಿ ಬಾಳುವದು ಅಗತ್ಯವಾಗಿದೆ ಎಂದರು.
ಉಪಾಧ್ಯಕ್ಷ ಮಹಮ್ಮದ್ ಬಷೀರ್ ಸಾಬ್ ಬೇಡ್ಕಣಿ ಮಾತನಾಡಿ, ಸಮಾಜದಲ್ಲಿ ಸರ್ವಧರ್ಮ ಸಮಭಾವದಿಂದ ಬದುಕುವದು ಮುಖ್ಯ ಎಂದರು. ಕಮಿಟಿಯ ಉಪಾಧ್ಯಕ್ಷರಾದ ಅಬ್ದುಲ್ ಮುನೀರ್ ಸಾಬ್ ಕಾನಗೋಡ, ಅಬ್ದುಲ್ ಸಾಬ್ ಹೇರೂರು, ಕಾರ್ಯದರ್ಶಿ ನೂರುಲ್ ಅಮೀನ್ ಹಾರ್ಸಿಕಟ್ಟಾ, ಜಂಟಿ ಕಾರ್ಯದರ್ಶಿ ಸಕೀಬ್ ಗುರ್ಕಾರ, ಖಜಾಂಚಿ ಇಲಿಯಾಸ್ ಗುರ್ಕಾರ ಹಾಗೂ ಮಜೀದ್ ಮಂಡಿ, ಮುನೀರ್ ಸಾಬ್, ಸುಬಾನ ಸಾಬ್, ಮುನೀರ್ ಖಾನ್, ಅರೀಪ್ ಸಾಬ್, ಮೋಸಿನ್ ಖಾನ್, ಅಮ್ಜದ್ ಸಾಬ್, ಅಬ್ದುಲ್ ಗನಿ ಸಾಬ್, ಸಲ್ಮಾನ ನಾಸಿರಖಾನ್ ಹಾಗೂ ಕಮಿಟಿಯ ಎಲ್ಲ ಸದಸ್ಯರೂ ಪಾಲ್ಗೊಂಡಿದ್ದರು.
ನಂತರ ಪಟ್ಟಣದ ಸರಕಾರಿ ಆಸ್ಪತ್ರೆ,ಮುಗದೂರಿನ ಪುನೀತ್ ರಾಜಕುಮಾರ ಅನಾಥಾಶ್ರಮ, ಹೊಸಳ್ಳಿಯ ಅರಬ್ಬಿಕ್ ಶಾಲೆಗಳಿಗೆ ತೆರಳಿ ಸಿಹಿ, ಹಣ್ಣು ಹಂಪಲು ವಿತರಿಸಲಾಯಿತು.