ಹಳಿಯಾಳ: ಗಿರಿಜನರ ಸಾಂಸ್ಕೃತಿಕ ಕಲೆಯ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕವಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ತಾಲೂಕಿನ ತತ್ವಣಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವೇದಿಕೆಯು ಗಿರಿಜನರ ಕಲೆ ಸಂಸ್ಕೃತಿಯನ್ನು ಮತ್ತು ಪರಂಪರೆಯನ್ನು ತಿಳಿಸುವ ಹಾಗೂ ಉಳಿಸಿ- ಬೆಳೆಸಿಕೊಂಡು ಹೋಗುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹತ್ವದ ಕಾರ್ಯವನ್ನು ಮಾಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಗಿರಿಜನರ ಉತ್ಸವವು ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಉತ್ಸವವಾಗಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗ್ರಾಮದ ದುರ್ಗಾ ದೇವಿ ದೇವಸ್ಥಾನದಿಂದ ಕಲಾ ತಂಡದ ಮೆರವಣಿಗೆ ನಡೆಯಿತು. ನೂರೈವತ್ತಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ ಪ್ರದರ್ಶನದೊಂದಿಗೆ ಮತ್ತು ಗ್ರಾಮದ ಎಲ್ಲ ಮಹಿಳೆಯರು ಕುಂಬ ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಲಾ ತಂಡಗಳ ಪ್ರದರ್ಶನವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆಗೆ ಆಗಮಿಸಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತತ್ವಣಗಿ ಗ್ರಾಮ ಪಂಚಾಯತದ ಅಧ್ಯಕ್ಷೆ ರಾಜನಬಿ ಅಬ್ದುಲ್ ಅಜೀಜ ಸಾಹೇಬ ಖಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ನಾಗವ್ವ ಬೆಗೂರ, ಸದಸ್ಯರಾದ ಲಕ್ಷ್ಮಣ ಮಿರಾಶಿ, ಅಮಿನಾಬಿ ಮುಜಾವರ, ಶಕೀಲ ನಬಿಸಾಬ ಚೌಕಿದಾರ, ಉಮೇಶ ಸುಂಕದ, ಖಿರಪ್ಪ ಅಡಿಕೆಹೊಸೂರ, ಯಲ್ಲವ್ವ ವಡ್ಡರ, ಶಿವಾಜಿ ಡಾಂಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯ್ಕ, ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ಸಿದ್ದಪ್ಪ ಬಿರಾದಾರ ಇದ್ದರು.