ಶಿರಸಿ: ಇಲ್ಲಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಕೊನೆಯ ದಿನದ ಅಂಗವಾಗಿ ಯುವ ಪ್ರತಿಭೆ ಕು. ವೈಷ್ಣವಿ ತಂತ್ರಿಯವರ ಭರತನಾಟ್ಯ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ವಿ.ಸೀಮಾ ಭಾಗ್ವತ್ ಶಿಷ್ಯೆಯಾದ ವೈಷ್ಣವಿ ಭರತನಾಟ್ಯದ ಆರಂಭದಲ್ಲಿ ಪುಷ್ಪಾಂಜಲಿ ನಡೆಸಿ ತದನಂತರದಲ್ಲಿ ಶ್ರೀ ಕೃಷ್ಣನ ಬಾಲ್ಯ ಲೀಲೆ ಹಾಗೂ ವಿವಿಧಾವತಾರದ ಅಭಿನಯಗಳನ್ನು ಮನೋಜ್ಞವಾಗಿ ಅಭಿನಯಿಸಿ ಸಭೆಯ ಕರತಾಡನಕ್ಕೆ ಭಾಜನಳಾದಳು. ನಂತರದಲ್ಲಿ ಶಾರದೆ ಕುರಿತಾದ ನೃತ್ಯ ಮತ್ತು ಕೊನೆಯಲ್ಲಿ ತಿಲ್ಲಾನದಲ್ಲಿ ಕೊಲ್ಲೂರು ಮೂಕಾಂಬಿಕೆಯ ಕುರಿತಾದ ಸಾಹಿತ್ಯವುಳ್ಳ ನೃತ್ಯ ಅಭಿನಯವನ್ನು ಅರ್ಧ ಗಂಟೆಗೂ ಮಿಕ್ಕಿ ಅಭಿನಯಿಸಿ ಸೈ ಎನಿಸಿಕೊಂಡಳು.
ಶಾಲಾ-ಕಾಲೇಜಿನಲ್ಲೂ ಪ್ರತಿಭಾವಂತ ವಿದ್ಯಾರ್ಥಿನಿಯಾದ ವೈಷ್ಣವಿಯನ್ನು ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿಯವರು ಗೌರವಿಸಿ ಮುಂದಿನ ಯಶಸ್ವಿಗೆ ಆಶೀರ್ವದಿಸಿದರು. ಗಿರಿಧರ್ ಕಬ್ನಳ್ಳಿ ಪರಿಚಯಿಸಿ, ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.