ಶಿರಸಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶುಕ್ರವಾರ ವಿವಿಧೆಡೆ ಭೂಮಿ ಪೂಜೆ ನೆರವೇರಿಸಿದರು.
ಶಾಸಕರ ಮಲೆನಾಡು ಅಭಿವೃದ್ಧಿ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮಾರಿಗುಡಿ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಹಾಗು ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಟಿಪ್ಪು ನಗರದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಗನವಾಡಿ ನಿರ್ಮಾಣಕ್ಕೆ ಸರಕಾರ ಬದ್ದವಾಗಿದೆ.ಆದರೆ ಜಾಗದ ಕೊರತೆಯಿದೆ.ಜಾಗ ತೋರಿಸಿದಲ್ಲಿ ಅಂಗನವಾಡಿ ಕಟ್ಟಡಕ್ಕೆ ಹಣ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು. ಟಿಪ್ಪು ನಗರ ಕುಳವೆ ಪಂಚಾಯತಿ ವ್ಯಾಪ್ತಿಗೆ ಬರುವುದರಿಂದ ಇಲ್ಲಿನ ಅಭಿವೃದ್ಧಿಗೆ ತೊಡಕಾಗಿರಬಹುದು. ಟಿಪ್ಪು ನಗರ ನಗರ ವ್ಯಾಪ್ತಿಗೆ ಹತ್ತಿರವಾಗುವುದರಿಂದ ನಗರಸಭೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಪ್ರಯತ್ನ ಮಾಡಲಾಗುವದೆಂದರು.
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸಿಡಿಪಿಯು ದತ್ತಾತ್ರೇಯ ಭಟ್ಟ, ಕುಳವೆ ಗ್ರಾ.ಪಂ ಸದಸ್ಯ ಶ್ರೀನಿವಾಸ ಶೆಟ್ಟಿ ಮುಂತಾದವರು ಇದ್ದರು.