ಯಲ್ಲಾಪುರ: ಭರತನಾಟ್ಯ ಕಲೆ ನಮ್ಮ ಪೂರ್ವಜರ ಕೊಡುಗೆಯಾಗಿದೆ. ಇಂತಹ ಕಲೆಗಳ ಆರಾಧನೆಯಿಂದ ದೇವಿ ಸುಪ್ರೀತಳಾಗುತ್ತಾಳೆ. ಶಾರದಾಂಬಾ ದೇವಿ ಸನ್ನಿಧಿಯಲ್ಲಿ ಭರತನಾಟ್ಯ ಪ್ರದರ್ಶನ ನೀಡುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಟಿಎಂಎಸ್ ಹಾಗೂ ಶಾರದಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಬ್ಬನಿ ಫೌಂಡೇಶನ್ ಸಹಯೋಗದಲ್ಲಿ ದಸರಾ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ನಾಟ್ಯರಾಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಕೇಂದ್ರೀಕರಣ ಪಂಚಾಯತರಾಜ್ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮಕ್ಕಳು ಭರತನಾಟ್ಯ ಮಾಡುವದನ್ನು ನೋಡುವುದೇ ಒಂದು ಸೊಗಸು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕ ನರೇಂದ್ರ ನಾಯಕ ಮಾತನಾಡಿ, ಸಂಗೀತ, ನಾಟಕ, ನೃತ್ಯ, ಚಿತ್ರಕಲೆ ಸೇರಿದಂತೆ ವಿವಿಧ ಕಲಾವಿದರು ಇಲಾಖೆಯಲ್ಲಿ ಅಥವಾ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊAಡು ಅರ್ಜಿ ಸಲ್ಲಿಸಿದರೆ ಅವರಿಗೆ ಅನುದಾನ ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಮಲೆನಾಡು ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿದರು. ಇಬ್ಬನಿ ಫೌಂಡೇಶನ್ ಅಧ್ಯಕ್ಷ ನರಸಿಂಹ ಹೆಗಡೆ, ವಿದೂಷಿ ಸುಮಾ ವೆಂಕಟರಮಣ ಉಪಸ್ಥಿತರಿದ್ದರು. ಶಿಕ್ಷಕ ಸಣ್ಣಪ್ಪ ಭಾಗ್ವತ ಸ್ವಾಗತಿಸಿದರು. ವೆಂಕಟರಮಣ ಭಟ್ಟ ನಿರ್ವಹಿಸಿದರು. ನಂತರ ಕೃಪಾ ವೆಂಕಟರಮಣ ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.