ಹಳಿಯಾಳ: ತಾಲೂಕಿನ ಕಬ್ಬು ಬೆಳೆಗಾರರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರಕಾರ ಮತ್ತು ಸಕ್ಕರೆ ಕಾರ್ಖಾನೆಯ ಅಡಳಿತ ಮಂಡಳಿಯೊಂದಿಗೆ ಕಳೆದ ಒಂದು ವಾರದಲ್ಲಿ ನಾನು ರೈತರ ಪರವಾಗಿ ಮೂರು ಸುತ್ತಿನ ಮಾತುಕತೆ ನಡೆಸಿದ್ದೇನೆ ಮತ್ತು ಒತ್ತಡವನ್ನೂ ಹಾಕಿದ್ದೇನೆ. ತಾಲೂಕಿನ ರೈತರ ಹೋರಾಟ ಅತ್ಯಂತ ನ್ಯಾಯೋಚಿತವಾಗಿದ್ದು, ಅದಕ್ಕೆ ನಮ್ಮ ಸಮ್ಮತಿ ಮತ್ತು ಬೆಂಬಲ ಎರಡೂ ಇವೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಬ್ಬು ಬೆಳೆಗಾರ ರೈತ ಮುಖಂಡರು ತಮ್ಮ ನ್ಯಾಯಯುತ ಬೇಡಿಕೆಗಳ ಕುರಿತಂತೆ ಇತ್ತೀಚಿಗೆ ನನ್ನೊಂದಿಗೆ ಚರ್ಚಿಸಿದ್ದರು. ರೈತರು ನನ್ನೊಂದಿಗೆ ಚರ್ಚೆ ಮಾಡಿದ ದಿನದಿಂದಲೇ ನಾನು ಈ ವಿಷಯವನ್ನು ಫಾಲೋ ಆಫ್ ಮಾಡುತ್ತಿದ್ದೇನೆ. ಸರಕಾರದಿಂದ ಮತ್ತು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಇನ್ನಷ್ಟೇ ಈ ಕುರಿತಂತೆ ಸಕಾರಾತ್ಮಕ ಸ್ಪಂದನೆ ದೊರೆಯಬೇಕಿದೆ ಎಂದಿದ್ದಾರೆ.
ತಾಲೂಕಿನಲ್ಲಿ ಬಹುತೇಕ ರೈತರು ಮಳೆ ಆಶ್ರಯಿಸಿಕೊಂಡು ಕಬ್ಬು ಬೆಳೆಯುತ್ತಾರೆ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಸುಮಾರಿಗೆ ಇಲ್ಲಿನ ಬಹುಪಾಲು ಕಬ್ಬು ಕ್ರಮೇಣ ಒಣಗಲು ಆರಂಭಿಸುತ್ತದೆ. ಇದರಿಂದಾಗಿ ತಾಲೂಕಿನ ಇಲ್ಲವೇ ಸ್ಥಳೀಯ ಕಬ್ಬನ್ನು ಎಷ್ಟು ತಡವಾಗಿ ಕಟಾವು ಮಾಡಲಾಗುತ್ತದೋ, ನಮ್ಮ ರೈತರಿಗೆ ಕಬ್ಬಿನ ತೂಕದಲ್ಲಿ ಅಷ್ಟೇ ಪ್ರಮಾಣದಲ್ಲಿ ನಷ್ಟವಾಗುತ್ತಿತ್ತು. ಹಾಗಾಗಿಯೇ ನಮ್ಮ ರೈತರು ಜ.15ರೊಳಗೆ ಸ್ಥಳೀಯ ಕಬ್ಬಿನ ಕಟಾವು ಮತ್ತು ಸಾಗಾಟವನ್ನು ಪೂರ್ಣ ಮಾಡಬೇಕು ಎಂದು ಒತ್ತಾಯಿಸಿದ್ದರು. ಅದು ನ್ಯಾಯೋಚಿತ ಬೇಡಿಕೆ, ಅದಕ್ಕೆ ಸೂಕ್ತ ಸ್ಪಂದನೆ ದೊರೆಯಲೇಬೇಕು ಎಂದಿದ್ದಾರೆ.
ಕಳೆದ ವರ್ಷ ಪ್ರತಿಟನ್ ಕಬ್ಬಿಗೆ ಸಾಗಾಟ ಮತ್ತು ಕಟಾವು ವೆಚ್ಚವನ್ನು ಹೊರತು ಪಡಿಸಿ 2592 ರೂ. ನಿವ್ವಳ ಎಫ್‌ಆರ್‌ಪಿ ಬೆಲೆ ನೀಡಲಾಗಿತ್ತು. ಈ ವರ್ಷ ಕಬ್ಬಿನ ರಿಕವರಿ 10.95ರಷ್ಟು ಬಂದಿದ್ದರಿAದ ಕಟಾವು ಮತ್ತು ಸಾಗಾಟ ವೆಚ್ಚವನ್ನು ಹೊರತುಪಡಿಸಿ, ಪ್ರತಿ ಟನ್ ಕಬ್ಬಿಗೆ ನಿವ್ವಳ 2371 ರೂ. ಎಫ್‌ಆರ್‌ಪಿ ದರವನ್ನು ಕೇಂದ್ರ ಸರಕಾರ ನಿಗದಿ ಮಾಡಿದೆ. ಹೋದ ವರ್ಷದ ಜೊತೆಗೆ ಹೋಲಿಕೆ ಮಾಡಿದರೆ ಈ ವರ್ಷದ ದರ 221 ರೂ. ಕಡಿಮೆ ಆಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕಬ್ಬಿನ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಸಾಗಾಟ ವೆಚ್ಚವೂ ಹೆಚ್ಚಾಗಿದೆ. ಕೃಷಿ ಕೂಲಿ ಕಾರ್ಮಿಕರ ದಿನಗೂಲಿಯೂ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿ ಇಲ್ಲಿನ ಕಬ್ಬಿಗೆ ಕಳೆದ ವರ್ಷಕ್ಕಿಂತ ಕಡಿಮೆ ಮೊತ್ತದ ನಿವ್ವಳ ಬೆಲೆ ನೀಡಿದರೆ ಅದರಿಂದ ನಮ್ಮ ರೈತರಿಗೆ ನಿಜಕ್ಕೂ ದೊಡ್ದ ನಷ್ಟ ಅಗುತ್ತದೆ. ಆದ್ದರಿಂದ ಸರಕಾರ ಕಳೆದ ವರ್ಷಕ್ಕಿಂತ ಹೆಚ್ಚಿನ ಮೊತ್ತದ ನಿವ್ವಳ ಬೆಲೆ ನೀಡಬೇಕಿದೆ ಎಂದಿದ್ದಾರೆ.
ರೈತರ ಈ ಎಲ್ಲಾ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ಸರಕಾರದ ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರೊಂದಿಗೆ ಮಾತುಕತೆ ನಡೆಸಿ ಒತ್ತಾಯಿಸಿದ್ದೇನೆ. ಇಲ್ಲಿನ ಕಬ್ಬು ಬೆಳೆಗಾರರ ಸ್ಥಿತಿ ಗತಿ ಯ ಕುರಿತು, ರೈತರು ನಡೆಸುತ್ತಿರುವ ಹೋರಾಟದ ಕುರಿತು ಮಾಹಿತಿ ನೀಡಿ ಚರ್ಚಿಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸುವಂತೆ ಒತ್ತಾಯಿಸಿದ್ದೇನೆ. ಹಾಗೆಯೇ ಎಚ್.ಎನ್.ಟಿ ಒಪ್ಪಂದದAತೆ ಕಳೆದ 2 ವರ್ಷದಿಂದ ಬಾಕಿ ಉಳಿಸಿಕೊಂಡಿರುವ ರೈತರ ಹಣವನ್ನು ಶೀಘ್ರವೇ ಕಾರ್ಖಾನೆಯವರು ತುಂಬಿ ಕೊಡಬೇಕು ಎಂಬುದು ನನ್ನ ಒತ್ತಾಯವೂ ಆಗಿದೆ ಎಂದರು.