ಕಾರವಾರ: ಶ್ರೀಮಂತರಿಗೆ ಸೇರಿದ ಕಟ್ಟಡ, ಜಾಗ ತೆರವು ಮಾಡಲು ಹಿಂದೇಟು ಹಾಕುತ್ತಿರುವ ಐಆರ್‌ಬಿಯವರು ಬಡವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕಂಪನಿಯ ಅಧಿಕಾರಿಗಳ ಮನಸ್ಸಿಗೆ ಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ವಿಶೇಷ ಭೂ ಸ್ವಾಧಿನಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದ್ದು, ನ್ಯಾಯ ಸಿಗುವಂತೆ ಮಾಡಬೇಕು ಎಂದು ತಾಲೂಕಿನ ಮಾಜಾಳಿಯ ನಿವಾಸಿ ಬಿ.ಜಿ.ಸಾವಂತ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಮಾಜಾಳಿ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದೇ ಇರುವ ತಮ್ಮ ಮನೆಗೆ ನೋಟಿಸ್ ನೀಡಿದೇ ಏಕಾಏಕಿ ಐಆರ್‌ಬಿ ಅಧಿಕಾರಿಗಳು ಆಗಮಿಸಿ ಕಂಪೌಂಡ್ ತೆರವು ಮಾಡುವಂತೆ ಸೂಚಿಸಿದ್ದು, ನಾವು ತೆರವು ಮಾಡದೇ ಇದ್ದರೆ ಅವರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮನೆಯ ನಿವಾಸಿ ಆರೋಪಿಸಿದರು.
ಈ ಹಿಂದೆ ಚತುಷ್ಪಥ ಕಾಮಗಾರಿಗೆ ಸರ್ವೆ ಮಾಡುವಾಗ ತಮ್ಮ ಮನೆ ಗುರುತು ಮಾಡಿಲ್ಲ. ಆದರೆ ನಾಲ್ಕೈದು ದಿನದ ಹಿಂದೆ ಆಗಮಿಸಿದ ಐಆರ್‌ಬಿ ಅಧಿಕಾರಿಗಳು ಕಂಪೌಂಡ್ ತೆರವು ಮಾಡುತ್ತೇವೆ ಎನ್ನುತ್ತಿದ್ದಾರೆ. ಈಗ ಏಕಾಏಕಿ ಹೇಗೆ ನಮ್ಮ ಮನೆಯವರೆಗೆ ಹೆದ್ದಾರಿ ಬರುತ್ತದೆ? ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಮ್ಮೆ ನೀಲನಕ್ಷೆಯಾದರೆ ಅದು ಪದೇ ಪದೇ ಬದಲಾವಣೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಚತುಷ್ಪಥ ಕಾಮಗಾರಿ ಆರಂಭದಲ್ಲಿ 60 ಮೀಟರ್ ನಿಗದಿ ಮಾಡಲಾಗಿತ್ತು. ಬಳಿಕ 48 ಮೀಟರ್ ಆಯಿತು. ಆದರೆ ಎಲ್ಲಾ ಕಡೆ ನಿಗದಿ ಪಡಿಸಿದಂತೆ ಭೂಸ್ವಾಧೀನ ಮಾಡಿಕೊಂಡಿಲ್ಲ. ಅವರ ಮನಸ್ಸಿಗೆ ಬಂದಂತೆ ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು, ಸ್ಥಳೀಯ ಅಧಿಕಾರಿಗಳು ಕಂಪನಿಯ ಮೇಲೆ ವಿಶ್ವಾಸವಿಟ್ಟು ಕೆಲಸವನ್ನು ನೋಡುತ್ತಿಲ್ಲ. ಆದರೆ ಅವರ ವಿಶ್ವಾಸಕ್ಕೆ ತಕ್ಕಂತೆ ಐಆರ್‌ಬಿ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಅನ್ಯಾಯವಾಗುತ್ತಿದ್ದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.