ಹೊನ್ನಾವರ: ಕನ್ನಡವೆಂದರೆ ಬರಿ ನುಡಿಯಲ್ಲ. ಅದು ನಮ್ಮ ಅಸ್ಮಿತೆ. ಅದು ನಮ್ಮ ಅಸ್ಥಿತ್ವ. ಕನ್ನಡಕ್ಕೆ ಹಿರಿದಾದ ಚರಿತ್ರೆ ಇದೆ. ಪರಂಪರೆ ಇದೆ. ಇಂತಹ ಕನ್ನಡ ಇಂದು ಅವಸಾನದತ್ತ ಜಾರುತ್ತಿರುವುದು ದುಃಖದ ಸಂಗತಿ ಎಂದು ಬೆಂಗಳೂರಿನ ಡಾ.ಸಂಧ್ಯಾ ಹೆಗಡೆ ದೊಡ್ಡಹೊಂಡ ಹೇಳಿದರು.
ಭಾರತದ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಪರಭಾಷಾ ವ್ಯಾಮೋಹದಿಂದ ಕುರುಡಾಗಿದ್ದೇವೆ. ವಿದೇಶಿ ಭಾಷೆಗಳ ಎದುರು ಮಂಡಿಯೂರಿ ಜ್ಞಾನಭಿಕ್ಷುಗಳಾಗಿದ್ದೇವೆ. ಇಂದಿನ ವಿದ್ಯಾರ್ಥಿಗಳು ಕನ್ನಡದ ಕೃತಿಗಳನ್ನು ಓದಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಸಾಹಿತ್ಯವನ್ನು ಓದದೇ ಇರುವುದರಿಂದಲೇ ಜೀವನದಲ್ಲಿ ಸೋಲುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಾಗೇಶ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ಮೂರು ದಿನಗಳ ಸರಣಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಹಲವು ಸಂಪ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡುತ್ತಿದ್ದೇವೆ. ಕಾಲೇಜಿನ ಉಪನ್ಯಾಸಕರಿಗೆ ರಜೆ ಇದ್ದಾಗಲೂ ನಮ್ಮ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ ಎಂದರು.
ವೇದಿಕೆಯಲ್ಲಿ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕ ಪ್ರಶಾಂತ ಹೆಗಡೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಟಿ.ಶ್ರೀನಿವಾಸ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ದೀಪಾ ಆರ್.ಗೌಡ ವಂದಿಸಿದರು. ಪರೀಕ್ಷಾ ಎಮ್.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.