ಕುಮಟಾ: ತಾಲೂಕಿನ ಖಂಡಗಾರ ಸಮೀಪದ ಕುಡಗುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿದ್ದ ವಸ್ತುಗಳ ಖರೀದಿಗೆ ಗ್ರಾಮಸ್ಥರೇ ಹಣವನ್ನು ಸಂಗ್ರಹಿಸಿ, ಶಾಲಾ ಸಾಮಗ್ರಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಅವರ ಮೂಲಕ ಶಾಲೆಗೆ ಹಸ್ತಾಂತರಿಸಿದರು.
ತಾಲೂಕಿನ ಮಿರ್ಜನ ಗ್ರಾಮ ಪಂಚಾಯತ ವ್ಯಾಪ್ತಿಯ ಖಂಡಗಾರ ಕುಡಗುಂಡಿಯ ಗ್ರಾಮಸ್ಥರೆಲ್ಲರೂ ಸೇರಿ ಹಣ ಸಂಗ್ರಹಿಸಿ, 12 ಸೆಟ್ ಡೆಸ್ಕ್ ಮತ್ತು ಬೆಂಚ್, 5 ಗ್ರೀನ್ ಬೋಡ್‌ಗಳು ಮತ್ತು 15 ಚಾಪೆಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿ, ವಿದ್ಯಾರ್ಥಿಗಳ ಕಲಿಕೆಗೆ ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಅವರು, ಗ್ರಾಮಸ್ಥರೆಲ್ಲರೂ ಸೇರಿ ಹಣ ಸಂಗ್ರಹಿಸಿ ಶಾಲೆಗೆ ಬೇಕಾದ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ಅವಕಾಶ ಒದಗಿಸಿದ್ದಾರೆ. ತಾವು ಕಲಿತ ಶಾಲೆ ಮತ್ತು ಕಲಿಸಿದ ಗುರುಗಳ ಮೇಲೆ ಗೌರವ ಇಟ್ಟಾಗ ಮತ್ತಷ್ಟು ಉನ್ನತ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದರು.
ಶಾಲೆಗೆ ದಾರಿ ತೋರಿಸುವ ನಾಮಫಲಕವನ್ನು ನಿವೃತ್ತ ಸೈನಿಕ ನಾಗೇಶ ನಾಯಕ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲೀಲಾವತಿ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯ್ಕ, ಸಿಆರ್‌ಪಿ ಭಾರತಿ ಆಚಾರ್ಯ, ಎಸ್‌ಡಿಎಂಸಿ ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯೋಜನೆ, ಅನುಷ್ಠಾನ, ಮತ್ತು ಆಯವ್ಯಯದ ವರದಿಯನ್ನು ಗಣೇಶ ಹೆಗಡೆ ವಾಚಿಸಿದರು. ಸುಬ್ರಾಯ ವೆಂಕಟರಮಣ ಭಟ್ಟ ಶಾಲೆಯ ದಾನಪತ್ರವನ್ನು ಸಮರ್ಪಣೆ ಮಾಡಿದರು. ಮುಖ್ಯಾಧ್ಯಾಪಕಿ ವಿದ್ಯಾವತಿ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ನಾಯ್ಕ ನಿರೂಪಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಗುರು ಆಚಾರಿ ವಂದಿಸಿದರು.