ಕುಮಟಾ: ತಾಲೂಕಿನ ಕಲಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯಿಂದ ಉಂಟಾದ ಸಮಸ್ಯೆಗಳನ್ನು 2023ರ ಮಾರ್ಚ್ ಅಂತ್ಯದೊಳಗೆ ಪರಿಹರಿಸಿಕೊಡುವ ಭರವಸೆಯನ್ನು ಎನ್‌ಎಚ್‌ಐ ಯೋಜನಾ ನಿರ್ದೇಶಕ ಲಿಂಗೇಗೌಡ ನೀಡಿದರು.
ತಾಲೂಕಿನ ಕಲಭಾಗ ಗ್ರಾಮ ಪಂಚಾಯತ್ ಕಚೇರಿಯಲ್ಲಿ ತಹಸೀಲ್ದಾರ್ ವಿವೇಕ ಶೇಣ್ವಿ ಅಧ್ಯಕ್ಷತೆಯಲ್ಲಿ ನಡೆದ ಚತುಷ್ಪಥ ಕಾಮಗಾರಿಯಿಂದ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಭೆಯಲ್ಲಿ ಮಾತನಾಡಿದರು. ಸಭೆಯ ಆರಂಭದಲ್ಲಿ ಎಪಿಎಂಸಿ ಸದಸ್ಯ ಅರವಿಂದ ಪೈ ಮತ್ತು ಊರಿನ ಮುಖಂಡ ಗಜು ನಾಯ್ಕ ಅಳ್ವೇಕೋಡಿ ಮಾತನಾಡಿ, ಕಲಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಚತುಷ್ಪಥ ಕಾಮಗಾರಿ ಕೈಗೊಂಡಿದ್ದರಿಂದ ಪ್ರತಿನಿತ್ಯ ಪದೇ ಪದೆ ಅಪಘಾತ ಸಂಭವಿಸುತ್ತಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಸಭೆ ನಡೆಸಿ ಎಂದು 2 ವರ್ಷ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಲಕ್ಷ್ಯ ವಹಿಸಿಲ್ಲ. ರಾಜ್ಯ ಸರ್ಕಾರ 6 ಕಿ.ಮೀ ವ್ಯಾಪ್ತಿಯಲ್ಲಿ ಲಭ್ಯತೆ ಆಧಾರದ ಮೇಲೆ 30 ಮೀಟರ್ ಅಗಲದಲ್ಲಿ ರಸ್ತೆ ನಿರ್ಮಾಣ ಮಾಡಿ ಎಂದು ಸೂಚನೆ ನೀಡಿದ್ದರೂ ಆ ಪ್ರಕಾರ ನಡೆದುಕೊಂಡಿಲ್ಲ. ಬ್ರಿಟಿಷರ ದಬ್ಬಾಳಿಕೆಯನ್ನು ನಾವೆಲ್ಲರೂ ಓದಿ ತಿಳಿದಿದ್ದೇವೆ. ಆದರೆ ಇಂದು ನಮ್ಮ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಜನಸಾಮಾನ್ಯರ ಬೇಡಿಕೆಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನೀರನಿಂದ ಹಂದಿಗೋಣದ ವರೆಗೆ 11 ಕೋಟಿ ವೆಚ್ಚದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 11 ಕೋಟಿ ರೂ. ಅನುದಾನ ನೀಡಿ, 1 ವರ್ಷದೊಳಗಡೆ ಕಾಮಗಾರಿ ಪೂರ್ಣಗೊಳಿಸಲು ಆದೇಶ ನೀಡಿದರೂ, 2 ವರ್ಷವಾದರೂ ಶೇ.50 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಹೊನ್ಮಾವ ಸೇತುವೆ ಅಗಲೀಕರಣ ನಿಮ್ಮ ಕಾಮಗಾರಿ ಪಟ್ಟಿಯಲ್ಲಿ ಸೇರಿಲ್ಲ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಕೂಡಲೇ ಜನಸಾಮಾನ್ಯರ ಬೇಡಿಕೆಗೆ ಮನ್ನಣೆ ನೀಡಬೇಕು. ಇಲ್ಲವಾದಲ್ಲಿ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಮಾತನಾಡಿ, ಕುಮಟಾ ಪಟ್ಟಣದಲ್ಲಿ 1 ಕಿ.ಮೀ ವ್ಯಾಪ್ತಿಯಲ್ಲಿ ಕೆಲವರು ನಮ್ಮ ಜಾಗ ಎನ್ನುತ್ತಿದ್ದಾರೆ. ನಕಾಶೆಯಲ್ಲಿ ಎನ್.ಎಚ್.ಎ.ಐ ಜಾಗ ಎಂದು ತೋರಿಸುತ್ತಿದೆ. ಇದರಿಂದ ಸ್ವಲ್ಪ ವಿಳಂಬವಾಗಿದೆ. ಹೊನ್ಮಾವದಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಿ, ಮಂಜೂರಿ ಪಡೆಯಲು ಪ್ರಯತ್ನಿಸುತ್ತೇವೆ. 6 ಕಿ.ಮೀ ಮರಾಕಲ್ ಕುಡಿಯುವ ನೀರಿನ ಪೈಪ್ ಇದ್ದು, ಅದನ್ನು ಶಿಫ್ಟ್ ಮಾಡಲು ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಇವೆಲ್ಲ ಸಮಸ್ಯೆ ಬಗೆಹರಿದ ತಕ್ಷಣ ಕಾಮಗಾರಿ ಮುಕ್ತಾಯಗೊಳಿಸಲಾಗುತ್ತದೆ. ಇನ್ನು ಕಲಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿ 2023 ಮಾರ್ಚ್ ಅಂತ್ಯದೊಳಗಡೆ ಸಂಪೂರ್ಣ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಚರಂಡಿ, ಬೀದಿ ದೀಪ ಅಳವಡಿಸಿ, ಜನರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ ವಿವೇಕ ಶೇಣ್ವಿ, ಪಿ.ಎಸ್.ಐ ನವೀನ ನಾಯ್ಕ, ಗ್ರಾ.ಪಂ ಅಧ್ಯಕ್ಷೆ ಗೀತಾ ಕುಬಾಲ, ಉಪಾಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯರಾದ ವಿರೂಪಾಕ್ಷ ನಾಯ್ಕ, ಲಿಂಗಪ್ಪ ನಾಯ್ಕ, ಭಾರತಿ ಪಟಗಾರ, ಮಂಜುಳಾ ಮುಕ್ರಿ, ರಾಘವೇಂದ್ರ ನಾಯ್ಕ, ಕಮಲಾ ಗಾವಡಿ, ಗೌರಿಶ ಕುಬಾಲ, ವಿಜಯಾನಂದ ತೋರಸ್ಕರ, ಸುರೇಶ ಪಟಗಾರ, ಪಿ.ಡಿ.ಓ ಡಿ.ಪ್ರಜ್ಞಾ, ನ್ಯಾಯವಾದಿ ಅರುಣ ಮೇಸ್ತ, ಗ್ರಾಮಸ್ಥರಾದ ಮಹೇಶ ಕಾಮತ್, ಅನಿಲ ನಾಯಕ, ಎಚ್.ಎ.ನಾಯ್ಕ, ಜೈವಿಠ್ಠಲ ಕುಬಾಲ, ವಾಮನ ಕಾಮತ್, ಎನ್.ಆರ್.ಮುಕ್ರಿ, ಐ.ಆರ್.ಬಿ ಕಂಪೆನಿಯ ಅಧಿಕಾರಿಗಳಾದ ಮಲ್ಲಿಕಾರ್ಜುನ, ಶ್ರೀನಿವಾಸ ಇತರರು ಉಪಸ್ಥಿತರಿದ್ದರು.