ಶಿರಸಿ: ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಚರ್ಚಿಸಿ ಸುಪ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಹೋರಾಟಗಾರರ ವೇದಿಕೆಯು ಕಳೆದ ನಾಲ್ಕು ಅಧಿವೇಶನದಿಂದಲೂ ಅಗ್ರಹಿಸಿದ ಬೇಡಿಕೆ ನಿರ್ಲಕ್ಷಿಸಿದ ಸರಕಾರದ ಕ್ರಮವನ್ನು ಖಂಡಿಸಿ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಶಿರಸಿಯಲ್ಲಿ ಬೃಹತ್ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ತಾಲೂಕಿನ, ಜಾನ್ಮನೆ ಗ್ರಾಮ ಪಂಚಾಯತ ಸಭಾಭವನದಲ್ಲಿ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಭೂಮಿ ಹಕ್ಕು ಮತ್ತು ಮೂಲಭೂತ ಸೌಕರ್ಯಕ್ಕಾಗಿ ‘ಹಳ್ಳಿ ಕಡೆ ನಡಿಗೆ’ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅರಣ್ಯ ಅತಿಕ್ರಮಣದಾರರನ್ನ ಉದ್ದೇಶಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸಂದೀಪ್ ನಾಯ್ಕ, ಸದಸ್ಯರಾದ ಶಂಕರ ಗೌಡ, ರೇಖಾ ನಾಯ್ಕ, ನೇಹಾ ಬಾನು, ಹೋರಾಟಗಾರರಾದ ಕರೀಂ ಸಾಬ, ಶೈಲೆಶ್ರೀ ತಲವಾರ, ಕರಿಯಪ್ಪ ಗೌಡ, ವಿನಾಯಕ್ ಶೇಟ್, ವಿಎಮ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ರತ್ನಾಕರ ನಾಯ್ಕ, ಕಮಲಾಕರ ನಾಯ್ಕ, ಇಬ್ರಾಹಿಂ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಗೆ ಕರೆ : ಗಾಂಧಿ ಜಯಂತಿಯಂದು ಮುಂಜಾನೆ 10 ಗಂಟೆಗೆ ಶಿರಸಿ ಹಳೆಬಸ್ ನಿಲ್ದಾಣದ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಂತ ರೀತಿಯ ಮೆರವಣಿಗೆ ಪ್ರಾರಂಭಿಸಿ, ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ರಾಘವೇಂದ್ರ ಸರ್ಕಲ್ ಬಳಿಯಿರುವ ಶಾಸಕರು ಹಾಗೂ ಸಭಾಧ್ಯಕ್ಷರ ಕಚೇರಿಯ ಎದುರುಗಡೆ ಧರಣಿಯೊಂದಿಗೆ ಗಾಂಧಿ ಜಯಂತಿ ಆಚರಿಸುವ ಮೂಲಕ ಸರಕಾರದ ಗಮನ ಸೆಳೆಯುವ ಕಾರ್ಯಕ್ರಮಕ್ಕೆ ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಲು ರವೀಂದ್ರ ನಾಯ್ಕ ಕರೆ ನೀಡಿದರು.