ಯಲ್ಲಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗ ನಿರ್ಮಾಣದ ಪರ ವಿರೋಧದ ಚರ್ಚೆ ಗರಿಗೆದರಿದ್ದು, ಯಲ್ಲಾಪುರ ತಾಲೂಕಿನಿಂದಲೇ 300ಕ್ಕೂ ಹೆಚ್ಚು ಸಂಘಟನೆಗಳು, ಸಂಘ- ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಆಗ್ರಹಿಸಿ ಇ- ಮೇಲ್ ಹಾಗೂ ಪೋಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಅಂಕೋಲಾ- ಹುಬ್ಬಳ್ಳಿ ರೈಲ್ವೇ ಮಾರ್ಗ ನಿರ್ಮಾಣಕ್ಕೆ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆಗ್ರಹ ಕೇಳಿ ಬರುತ್ತಿದೆ. ಅದೇ ರೀತಿ ವಿರೋಧಿಸುವ ಒಂದು ಬಣವು ಕೂಡ ಸಿದ್ಧವಾಗಿದ್ದು, ಸ್ಥಳೀಯ ಪರಿಸರವನ್ನು ಮುಂದಿಟ್ಟುಕೊಂಡು ವಿರೋಧ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕ ಜನ ಅರಣ್ಯವನ್ನು ಅತಿಕ್ರಮಿಸಿ ತೋಟ, ಗದ್ದೆಗಳನ್ನು, ಹೋಂ ಸ್ಟೇಗಳನ್ನು ಮಾಡಿಕೊಂಡವರ ಸಂಖ್ಯೆಯೇ ಹೆಚ್ಚಾಗಿದೆ.
ತಾಲೂಕಿನಲ್ಲಿಯ ಒಂದು ವರ್ಗಕ್ಕೆ (ಯಾವುದೇ ಜಾತಿ ಧರ್ಮದವರು) ತಾತ- ಮುತ್ತಾತಂದಿರು ಮಾಡಿಟ್ಟಿರುವ ತೋಟಗದ್ದೆ ಸಾಕಷ್ಟು ಪ್ರಮಾಣದಲ್ಲಿ ಇದ್ದು, ಅದರಿಂದ ಬರುವ ಫಸಲು- ಫಲಗಳಿಂದ ಬೇಕಾದ ಹಾಗೆ ಬದುಕು ಸಾಗಿಸಲು ಅನುಕೂಲತೆಗಳು ಹೊಂದಿದ್ದಾರೆ. ಆದರೆ ಪ್ರತಿವರ್ಷ ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಪಿಯುಸಿ, ಎಸ್‌ಎಸ್‌ಎಲ್‌ಸಿ, ಡಿಗ್ರಿ, ಐಟಿಐ, ಡಿಪ್ಲೋಮಾ ಮುಗಿಸಿ ಬೇರೆ ಬೇರೆ ಮಹಾನಗರಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ತೆರಳುತ್ತಿದ್ದಾರೆ. ಅಲ್ಲಿ ಅವರ ಕಲಿಕೆಗೆ ತಕ್ಕಂತೆ ಉದ್ಯೋಗ, ಸಂಬಳ ಸಿಗದೇ ಮರಳಿ ಮನೆಗೆ ಬಂದು ನಿರುದ್ಯೋಗಿಗಳಾಗುತ್ತಿದ್ದಾರೆ. ಇಂತಹ ಬಡ ಯುವಜನತೆಗೆ ಸ್ಥಳದಲ್ಲಿಯೇ ಉದ್ಯೋಗ ಸಿಗುವಂತಾದರೆ ಮನೆಯಲ್ಲಿದ್ದು ತಾವು ಬದುಕು ಸಾಗಿಸಿ ತಮ್ಮವರನ್ನು ಮರ್ಯಾದೆಯಿಂದ ಬದುಕುವಂತೆ ನೋಡಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವ ಜಾಗೃತಿ ಇತ್ತೀಚೆಗೆ ಕಂಡುಬರುತ್ತಿದೆ. ಇದರ ಪರಿಣಾಮವೇ ರೈಲ್ವೆಗೆ ಇನ್ನಷ್ಟು ಒತ್ತಾಸೆ ಮೂಡಿಸಿದೆ.
ಅಂಕೋಲಾ- ಹುಬ್ಬಳ್ಳಿ ರೈಲ್ವೇ ಮಾರ್ಗ ನಿರ್ಮಾಣವಾಗಿ ರೈಲ್ವೆಗಳು ಓಡಾಡಲು ಪ್ರಾರಂಭಿಸಿದರೆ. ಸ್ಥಳೀಯವಾಗಿ ಬಹಳಷ್ಟು ಜನರಿಗೆ ಉದ್ಯೋಗ ದೊರಕಲಿದೆ. ಬೇರೆ ಬೇರೆ ಮಹಾನಗರಗಳಿಗೆ ತೆರಳಲೂ ಕೂಡ ರೈಲ್ವೆ ಅನುಕೂಲಕರವಾಗಿರಲಿದೆ. ಪ್ರತಿ ದಿನ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಸಂಚರಿಸುವ ಸಾವಿರಾರು ವಾಹನಗಳು ಹೊರಸೂಸುವ ಹೊಗೆ ಹಾಗೂ ವಿಷಯುಕ್ತ ರಾಸಾಯನಿಕಗಳಿಂದ ಪರಿಸರಕ್ಕೆ ಹಾನಿಕಾರಿಯಾಗಿದೆಯೇ ಹೊರತು ರೈಲ್ವೆ ಹಳಿಯ ನಿರ್ಮಾಣ ಹಾಗೂ ಓಡಾಟದಿಂದ ಅಲ್ಲ ಎಂದು ಬಹಳಷ್ಟು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದಾಗಲೂ ಕೂಡ ಅಂಕೋಲಾ- ಹುಬ್ಬಳ್ಳಿ ರೈಲ್ವೇ ಮಾರ್ಗಕ್ಕೆ ಮಾತ್ರ ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 20 ವರ್ಷದಿಂದೀಚೆಗೆ ಗದ್ದೆಗಳು ತೋಟವಾಗುತ್ತಿದೆ, ಸೊಪ್ಪಿನ ಬೆಟ್ಟ ಗದ್ದೆಯಾಗುತ್ತಿದೆ. ಕಟ್ಟಿಗೆ ತುಂಡಿನೊಳಗೆ ಗೆದ್ದಲು ಕೊರೆದಂತೆ ಅರಣ್ಯ ನಾಶವಾಗಿ ಹೊಸ ಸೊಪ್ಪಿನ ಬೆಟ್ಟ ನಿರ್ಮಾಣವಾಗುತ್ತಿದೆ. ಇದು ಯಲ್ಲಾಪುರದಲ್ಲಿ ಈಗಿನ ಸ್ಥಿತಿಯಾಗಿದೆ. ಹಿಂದಿನ 15 ವರ್ಷದಿಂದಲೂ ನಡೆದುಕೊಂಡು ಒಬ್ಬರಿಂದ ಆಘೋಷಿತ ಪದ್ದತಿಯಾಗಿದೆ. ಇವೆಲ್ಲ ಹೆಚ್ಚು ಕಾಣಸಿಗುವುದು ಪರಿಸರ ಹೋರಾಟದ ಮುಖವಾಡ ಧರಿಸಿಕೊಂಡಿರುವ ಡೋಂಗಿ ಪರಿಸರವಾಧಿಗಳಲ್ಲಿಯೇ ಹೆಚ್ಚು. ಈ ಬಗ್ಗೆ ಯಾರೂ ಪ್ರಶ್ನಿಸಬಾರದು. ಪ್ರಶ್ನಿಸಿದರೆ ಅವರನ್ನು ಬೇರೆ ಬೇರೆ ಹೆಸರಿನಲ್ಲಿ ವಿರೋಧಿಸುವ ಸಾಂಘಿಕ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ.
ಅದೇನೆ ಇದ್ದರೂ ಕೂಡ ಯಲ್ಲಾಪುರ ತಾಲೂಕು ಮಟ್ಟದಲ್ಲಿ ಇತ್ತೀಚಿನ ಯುವಜನತೆಯಲ್ಲಿ ಉದ್ಯೋಗದ ಜಾಗೃತೆ ಮೂಡುತ್ತಿದೆ. ಬೇರೆ ಎಲ್ಲ ನಗರ ತಾಲೂಕುಗಳಂತೆ ತಮ್ಮ ತಾಲೂಕು ಕೂಡ ಅಭಿವೃದ್ಧಿಯಾಗಬೇಕು ತಮ್ಮ ತಾಲೂಕಿನ ಮೂಲಕ ಕೂಡ ರೈಲ್ವೆ ಓಡಬೇಕು ಎನ್ನುವ ಬಯಕೆ ಹೆಚ್ಚುತ್ತಿದೆ. ಹೀಗಾಗಿ ಬಹಳಷ್ಟು ಜನ ಅಂಕೋಲಾ ಹುಬ್ಬಳ್ಳಿ ರೈಲ್ವೇ ಮಾರ್ಗದ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರದ ಸಮಿತಿಗೆ ತಲುಪುವಂತೆ ಜಿಲ್ಲಾಧಿಕಾರಿಗಳ ಇ- ಮೇಲ್ ಮತ್ತು ಕಚೇರಿಗೆ ಆಗ್ರಹಪೂರ್ವಕ ಮನವಿ ಪತ್ರವನ್ನು ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಅಂಕೋಲಾ- ಹುಬ್ಬಳ್ಳಿ ರೈಲ್ವೇ ಮಾರ್ಗ ನಿರ್ಮಾಣವಾಗಬೇಕು ಎಂದು ಬಹಳಷ್ಟು ಜನ ತಮ್ಮ ಪತ್ರವನ್ನು ಆಗ್ರಹ ಪೂರ್ವಕ ಮನವಿ ಪತ್ರವನ್ನು ಲಗತ್ತಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗೆ ವಿರೋಧಿಸುವವರನ್ನು ಟೀಕಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.